ತಾಲಿಬಾನ್ ಉಗ್ರಗಾಮಿಗಳು ಯುವತಿಯರನ್ನು ಶಿಕ್ಷಣದಿಂದ ದೂರವಿಡಲು ದುಷ್ಟ ವಿಧಾನಗಳನ್ನು ಹೆಚ್ಚೆಚ್ಚಾಗಿ ಬಳಸುತ್ತಿದ್ದು, ಬಾಲಕಿಯರ ಮೇಲೆ ಅನಿಲ ದಾಳಿಯನ್ನು ತಾಲಿಬಾನಿಗಳು ನಡೆಸಿದ್ದಾರೆಂದು ವರದಿಯಾಗಿದೆ.
ತಾಲಿಬಾನ್ ಅಡಿಯಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧಿಸಲಾಗಿದ್ದು, ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಎಳಿಸದಂತೆ ಸ್ಥಳೀಯ ಜನರಿಗೆ ಎಚ್ಚರಿಸಲು ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಘಟನೆಯು ಶಾಲೆಯ ವಿರುದ್ಧ ಉದ್ದೇಶಪೂರ್ವಕ ದಾಳಿಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಆಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣ ವಿರೋಧಿಸುವ ತಾಲಿಬಾನ್ ಮತ್ತು ಇತರೆ ಉಗ್ರವಾದಿ ಗುಂಪುಗಳು ಶಾಲಾಬಾಲಕಿಯರ ಮೇಲೆ ದಾಳಿ ಮಾಡುತ್ತಾರೆನ್ನುವುದು ಜನಜನಿತವಾಗಿದೆ.ಆಫ್ಘಾನಿಸ್ತಾನದ ಕಾಪಿಸಾ ಪ್ರಾಂತ್ಯದ ಮೊಹಮದ್ ರಖಿ ಗ್ರಾಮದ ಶಾಲೆಯೊಂದರ ಮೇಲೆ ವಿಷಾನಿಲದ ದಾಳಿ ನಡೆಸಲಾಯಿತು. ಸುಮಾರು 90 ವಿದ್ಯಾರ್ಥಿನಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದರು.
ವಿಷಾಯುಕ್ತ ಅನಿಲದ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದು ತನಿಖೆ ನಡೆಸಲಾಗುತ್ತಿದೆಯೆಂದು ಒಳಾಡಳಿತ ಸಚಿವಾಲಯದ ವಕ್ತಾರ ಜೆಮೇರಿ ಬಷೇರಿ ತಿಳಿಸಿದರು. ತಾಲಿಬಾನ್ ಬಿಳಿ ಫಾಸ್ಫರಸ್ ಪುಡಿಯನ್ನು ವಿಷಾನಿಲಕ್ಕೆ ಬಳಸುತ್ತಿದೆಯೆಂದು ನ್ಯಾಟೊ ಆರೋಪಿಸಿದೆ.ವಿಚಿತ್ರ ವಾಸನೆಯು ಗಾಳಿಯಲ್ಲಿ ವ್ಯಾಪಿಸಿದ್ದರಿಂದ ಬಾಲಕಿಯರು ಅಸಹಜವಾಗಿ ವರ್ತಿಸತೊಡಗಿದರೆಂದು ಮುಖ್ಯ ಉಪಾಧ್ಯಾಯಿನಿ ಹೇಳಿದ್ದಾರೆ.
ಬಾಲಕಿಯರ ಶಾಲೆ ಮೇಲೆ ಇದು ವಿಷಾನಿಲ ದಾಳಿ ಮಾಡಿದ ಮೂರನೇ ಪ್ರಕರಣವಾಗಿದ್ದು, ಯುವತಿಯರನ್ನು ಶಾಲೆಗೆ ಹೋಗದಂತೆ ನಿಷೇಧಿಸಲು ದುಷ್ಟ ವಿಧಾನಗಳನ್ನು ಉಗ್ರಗಾಮಿಗಳು ಅನುಸರಿಸುತ್ತಿದ್ದಾರೆಂದು ಬ್ರಿಟಿಷ್ ದಿನಪತ್ರಿಕೆ ತಿಳಿಸಿದೆ. |