ಅಮೆರಿಕ ಮತ್ತು ಪಾಕಿಸ್ತಾನವು ತಾಲಿಬಾನ್ ಉಗ್ರರ ಮೂಲೋತ್ಪಾಟನೆಗೆ ಜಂಟಿಯಾಗಿ ಡ್ರೋನ್ ವಿಮಾನಗಳಿಂದ ದಾಳಿಗಳನ್ನು ನಡೆಸಿದೆಯೆಂದು ಹೆಸರುಹೇಳಲು ಇಚ್ಛಿಸದ ಅಮೆರಿಕದ ಅಧಿಕಾರಿಗಳು ರೋಚಕ ಸಂಗತಿಯನ್ನು ಬಯಲುಮಾಡಿದ್ದಾರೆ.
ಪಾಕಿಸ್ತಾನದ ಪ್ರದೇಶದೊಳಕ್ಕೆ ಡ್ರೋನ್ ಕಾರ್ಯಾಚರಣೆಯಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಸಹಕರಿಸುತ್ತಿವೆಯೆಂದು ಈ ಅಧಿಕಾರಿಗಳನ್ನು ಉಲ್ಲೇಖಿಸಿ ಮಾದ್ಯಮ ವರದಿ ಮಾಡಿದೆ. ಅಮೆರಿಕ ಮಿಲಿಟರಿಯು ಜಂಟಿ ಕಾರ್ಯಾಚರಣೆ ಅಡಿಯಲ್ಲಿ ಗುರಿಗಳ ಮೇಲೆ, ಹಾರಾಟ ಮಾರ್ಗಗಳು ಮತ್ತು ದಾಳಿ ನಿರ್ಧಾರಗಳಿಗೆ ಪಾಕಿಸ್ತಾನ ಅಧಿಕಾರಿಗಳಿಗೆ ಗಮನಾರ್ಹ ನಿಯಂತ್ರಣ ನೀಡಿದೆಯೆಂದು ವರದಿ ತಿಳಿಸಿದೆ.
ಹೊಸ ಸಹಭಾಗಿತ್ವದ ಅಡಿಯಲ್ಲಿ, ಆಫ್ಘಾನಿಸ್ತಾನದ ಜಲಾಲಬಾದ್ ಕಮಾಂಡ್ ಕೇಂದ್ರದಲ್ಲಿ ಅಮೆರಿಕದ ಸಹವರ್ತಿಗಳ ಜತೆ ಕೆಲಸ ಮಾಡುವ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಫ್ಘಾನಿಸ್ತಾನ ಗಡಿಯನ್ನು ದಾಟಲು ಅಮೆರಿಕದ ಮಿಲಿಟರಿ ಡ್ರೋನ್‌ಗಳಿಗೆ ಅವಕಾಶ ನೀಡಲಾಗುತ್ತದೆಂದು ಲಾಸ್ ಏಂಜಲ್ಸ್ ಟೈಮ್ಸ್ ವರದಿಮಾಡಿದೆ.
ಪಾಕಿಸ್ತಾನಿಗಳು ಅಮೆರಿಕದಿಂದ ಬಹುಕಾಲದಿಂದ ಡ್ರೋನ್ ತಂತ್ರಜ್ಞಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಪಾಕ್ ಅಧ್ಯಕ್ಷ ಜರ್ದಾರಿ ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಮೇಲಿಂದ ಮೇಲೆ ಡ್ರೋನ್ ತಂತ್ರಜ್ಞಾನ ಒದಗಿಸುವಂತೆ ಒತ್ತಾಯಿಸಿದ್ದರು. ಜಂಟಿ ಕಾರ್ಯಾಚರಣೆಯನ್ನು ತಾಲಿಬಾನ್ ಮತ್ತು ಅಲ್ ಖಾಯಿದಾ ವಿರುದ್ಧ ನೇರವಾಗಿ ಪಾಕಿಸ್ತಾನವನ್ನು ತೊಡಗಿಸುವ ಪ್ರಯತ್ನವೆಂದು ಹೇಳಲಾಗಿದೆ. |