ಶ್ರೀಲಂಕಾದಲ್ಲಿ ನಾಗರಿಕರ ಮೇಲೆ ಮನಬಂದಂತೆ ಗುಂಡಿನ ದಾಳಿಯನ್ನು ನಿಲ್ಲಿಸಬೇಕೆಂದು ಹಾಗೂ ತಮಿಳು ವ್ಯಾಘ್ರಗಳು ಶರಣಾಗಬೇಕೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಶ್ರೀಲಂಕಾಗೆ ಒತ್ತಾಯಿಸಿದ್ದು, ದಶಕಗಳ ಕಾಲದ ಆಂತರಿಕ ಯುದ್ಧದಿಂದ ಉದ್ಭವಿಸಿದ ಮಾನವೀಯ ಬಿಕ್ಕಟ್ಟು ವಿನಾಶಕಾರಿಯಾಗಿ ಪರಿಣಮಿಸಬಹುದೆಂದು ಅವರು ಎಚ್ಚರಿಸಿದ್ದಾರೆ.
ಶ್ರೀಲಂಕಾದಲ್ಲಿ ಮಾನವೀಯ ನೆಲೆಯ ಬಿಕ್ಕಟ್ಟು ಉದ್ಭವಿಸಿದೆ. ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾದ ಹತಾಶ ವಿದ್ಯಮಾನಗಳಿಂದ ತಮಗೆ ತುಂಬ ದುಃಖವಾಗಿದ್ದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು. ಜನರ ಸಂಕಷ್ಟಗಳನ್ನು ಕಡಿಮೆ ಮಾಡುವಂತೆ ಅವರು ಸರ್ಕಾರ ಮತ್ತು ಎಲ್‌ಟಿಟಿಇ ಎರಡಕ್ಕೂ ಒತ್ತಾಯಿಸಿದರು.
ತಮಿಳು ವ್ಯಾಘ್ರಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಾಗರಿಕರ ನಿರ್ಗಮನಕ್ಕೆ ಅವಕಾಶ ನೀಡಬೇಕು. ನಾಗರಿಕನ್ನು ಬಲವಂತವಾಗಿ ಪಡೆಗೆ ನೇಮಕ ಮಾಡುವುದು ಮತ್ತು ಮಾನವ ಗುರಾಣಿಗಳಂತೆ ಅವರ ಬಳಕೆ ಖಂಡನೀಯ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದರು. ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುವಂತೆ ತಾವು ಶ್ರೀಲಂಕಾ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಅವರು ನುಡಿದರು.
ಹತ್ತಾರು ಸಾವಿರ ನಾಗರಿಕರು ಸರ್ಕಾರಿ ಪಡೆಗಳು ಮತ್ತು ತಮಿಳು ವ್ಯಾಘ್ರಗಳ ನಡುವೆ ಸಿಕ್ಕಿಬಿದ್ದಿದ್ದು, ತಪ್ಪಿಸಿಕೊಳ್ಳಲು ದಾರಿಯಿಲ್ಲದೇ, ಆಹಾರ, ನೀರು, ಆಶ್ರಯ ಮತ್ತು ಔಷಧಿಯ ಕೊರತೆ ಎದುರಿಸುತ್ತಿದ್ದಾರೆಂದು ಅವರು ನುಡಿದರು. ಶ್ರೀಲಂಕಾ ಸರ್ಕಾರಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು. ಮೊದಲಿಗೆ ಸರ್ಕಾರ ಎಡಬಿಡದೇ ಶೆಲ್ ದಾಳಿಯನ್ನು ನಿಲ್ಲಿಸಿ ನೂರಾರು ಜನರ ಜೀವಹಾನಿ ತಪ್ಪಿಸಬೇಕು, ಸಂಘರ್ಷವಲಯದಲ್ಲಿ ಭಾರೀ ಶಸ್ತ್ರಾಸ್ತ್ರ ಬಳಸುವುದಿಲ್ಲವೆಂಬ ಬದ್ಧತೆಯನ್ನು ಸರ್ಕಾರ ಉಳಿಸಿಕೊಳ್ಳಬೇಕು ಎಂದು ಒಬಾಮಾ ಹೇಳಿದರು. |