ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಸಮರದಲ್ಲಿ ನಾಗರಿಕರ ಸಾವುನೋವನ್ನು ತಪ್ಪಿಸಬೇಕೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕರೆ ನೀಡಿದ ಬಳಿಕ ತಮಿಳು ಬಂಡುಕೋರರ ವಿರುದ್ಧ ಸಮರಕ್ಕೆ ನಿಲ್ಲಿಸಬೇಕೆಂಬ ಅಂತಾರಾಷ್ಟ್ರೀಯ ಕರೆಯನ್ನು ಶ್ರೀಲಂಕಾ ಸರ್ಕಾರ ಗುರುವಾರ ತಿರಸ್ಕರಿಸಿದೆ.
ಕಾರ್ಯಾಚರಣೆ ನಿಲ್ಲಿಸಬೇಕೆಂಬ ಅಂತಾರಾಷ್ಟ್ರೀಯ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಮಾಧ್ಯಮ ಸಚಿವ ಲಕ್ಷ್ಣಣ್ ಯಾಪಾ ಅಬೆಯವರ್ದನಾ ವರದಿಗಾರರಿಗೆ ತಿಳಿಸಿದರು. ವಿಶ್ವಸಂಸ್ಥೆ ಭದ್ರತಾಮಂಡಳಿಯು ಯುದ್ಧವನ್ನು ನಿಲ್ಲಿಸುವಂತೆ ಮಾಡಿದ ಒತ್ತಾಯಕ್ಕೆ ಸಹ ಅವರು ಮಣಿದಂತೆ ಕಂಡುಬಂದಿಲ್ಲ.
ಶ್ರೀಲಂಕಾ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಶೆಲೆ ದಾಳಿಗಳಿಂದ ಸಂಘರ್ಷ ವಲಯದಲ್ಲಿ ನೂರಾರು ನಾಗರಿಕರು ಜೀವಕಳೆದುಕೊಂಡಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ, ನಾಗರಿಕರ ಜೀವರಕ್ಷಣೆ ಮಾಡುವುದನ್ನು ಖಾತರಿಪಡಿಸುವಂತೆ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಕರಾರುಗಳನ್ನು ಗೌರವಿಸುವಂತೆ ವಿಶ್ವಸಂಸ್ಥೆಯ ಹೇಳಿಕೆಯು ಶ್ರೀಲಂಕಾ ಸರ್ಕಾರಕ್ಕೆ ಒತ್ತಾಯಿಸಿದೆ. ಆದರೆ ಸಮರಕ್ಕೆ ತೆರೆ ಎಳೆಯಬೇಕೆಂಬ ಕರೆಯನ್ನು ಸರ್ಕಾರ ತಿರಸ್ಕರಿಸಿದ್ದು, ಎಲ್‌ಟಿಟಿಇ ಸೋಲಿನ ಅಂಚಿನಲ್ಲಿದ್ದು ಈ ಹಂತದಲ್ಲಿ ಕದನವಿರಾಮದಿಂದ ಅದರ ಪುನರ್‌ಸಂಘಟನೆಗೆ ಅವಕಾಶ ಕಲ್ಪಿಸುತ್ತದೆಂದು ತಿಳಿಸಿದೆ. |