ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನ ಮುಂದುವರಿದಿರುವ ಶ್ರೀಲಂಕಾದ ಉತ್ತರಭಾಗದಲ್ಲಿ ಶ್ರೀಲಂಕಾ ತಮಿಳು ಜನಾಂಗದ ಮೇಲೆ ದೌರ್ಜನ್ಯಗಳ ವಿರುದ್ಧ ದನಿಎತ್ತುವಂತೆ ದಕ್ಷಿಣ ಆಫ್ರಿಕಾದಲ್ಲಿರುವ ಸಾವಿರಾರು ತಮಿಳರು ನೂತನ ಅಧ್ಯಕ್ಷ ಜಾಕೋಬ್ ಜೂಮಾ ಅವರಿಗೆ ತಿಳಿಸಿದ್ದಾರೆ.
ಆಡಳಿತಾರೂಢ ಎಎನ್‌ಸಿ ಸದಾ ಶ್ರೀಲಂಕಾದ ತಮಿಳರಿಗೆ ಬೆಂಬಲವಾಗಿ ನಿಂತಿದ್ದು, ಈ ಕ್ಷಣದಲ್ಲಿ ತಮಿಳರ ಮೇಲೆ ದೌರ್ಜನ್ಯ ವಿರುದ್ಧ ಜೂಮಾ ದನಿ ಎತ್ತಬೇಕು ಎಂದು ತಮಿಳು ಸಮನ್ವಯ ಸಮಿತಿ ಅಧ್ಯಕ್ಷ ರಿಚರ್ಡ್ ಗೋವೆಂದರ್ ತಿಳಿಸಿದ್ದಾರೆ.
ರಾಷ್ಟ್ರದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ತಮಿಳರ ಸಂಕಷ್ಟಗಳ ಬಗ್ಗೆ ಗಮನಸೆಳೆಯಲು ಡರ್ಬನ್‌ನಲ್ಲಿ ಇತ್ತೀಚೆಗೆ ಸಮಿತಿಯು ಮೆರವಣಿಗೆಯೊಂದನ್ನು ಹಮ್ಮಿಕೊಂಡಿದೆ. ಇದಲ್ಲದೇ ಸಮಿತಿಯ ಸದಸ್ಯರೊಬ್ಬರು ತಮಿಳರ ರಕ್ಷಣೆಗಾಗಿ ಒಂದು ವಾರದ ಉಪವಾಸ ನಿರಶನ ಕೂಡ ಹಮ್ಮಿಕೊಂಡರು.
ನೂರಾರು ನಾಗರಿಕರ ಹತ್ಯೆ ಮತ್ತು ಯುದ್ಧವಲಯದ ಏಕೈಕ ಆಸ್ಪತ್ರೆ ಮೇಲೆ ಬಾಂಬ್ ದಾಳಿಯು ಮಾನವ ಹಕ್ಕು ರಕ್ಷಣೆ ವಿರುದ್ಧವಾಗಿದೆ. ಶ್ರೀಲಂಕಾದಲ್ಲಿ ನಮ್ಮ ಸೋದರ, ಸೋದರಿಯರು ಬಲಿಯಾಗುವುದನ್ನು ವೀಕ್ಷಿಸುತ್ತಾ ಮೂಕಪ್ರೇಕ್ಷಕರಾಗಿ ನಿಲ್ಲಲು ಸಾಧ್ಯವಿಲ್ಲ. ಇದೊಂದು ಹತ್ಯಾಕಾಂಡವಾಗಿದ್ದು, ಈ ವಿಷಯವನ್ನು ದಕ್ಷಿಣ ಆಫ್ರಿಕಾ ಮತ್ತು ವಿಶ್ವಸಮುದಾಯ ಕೈಗೆತ್ತಿಕೊಳ್ಳಲು ತಾವು ಬಯಸುವುದಾಗಿ ಅವರು ಹೇಳಿದ್ದಾರೆ. |