ಮೆಲ್ಬೋರ್ನ್ ನಗರದಲ್ಲಿ ಹಿಂಸಾತ್ಮಕ ದಾಳಿಗಳಿಗೆ ಗುರಿಯಾಗಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಆಸ್ಟ್ರೇಲಿಯದ ಅಧಿಕಾರಿಗಳು ಶುಕ್ರವಾರ ಸಹಾಯವಾಣಿಯೊಂದನ್ನು ಆರಂಭಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಮಾತನಾಡುವ ನಿರ್ವಾಹಕರನ್ನು ಹೊಂದಿರುವ ಸಹಾಯವಾಣಿಯನ್ನು ಸ್ಥಳೀಯ ಭಾರತೀಯ ಸಮುದಾಯದ ಜನರ ಜತೆ ಸಮಾಲೋಚಿಸಿದ ಬಳಿಕ ಸ್ಥಾಪಿಸಲಾಗಿದೆ.
ಆಸ್ಟ್ರೇಲಿಯದ ಎರಡನೇ ದೊಡ್ಡ ನಗರದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳ ಸರಣಿ ಪ್ರಕರಣಗಳು ನಡೆದ ಬಳಿಕ ಈ ಸಹಾಯವಾಣಿ ರಚಿಸಲಾಗಿದೆ. ಆಸ್ಟ್ರೇಲಿಯದ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟವು ಈ ಹಲ್ಲೆಗಳನ್ನು ಆಂಶಿಕ ಜನಾಂಗೀಯ ಪ್ರೇರಿತವೆಂದು ವ್ಯಾಖ್ಯಾನಿಸಿದೆ. 'ಭಾರತೀಯ ವಿದ್ಯಾರ್ಥಿಗಳ ಮೇಲೆ ಗುರಿಯಿರಿಸಿ ಹಲ್ಲೆ ನಡೆಸಲಾಗುತ್ತಿದೆ.
ಅಪರಾಧದ ಮಟ್ಟ ಹೆಚ್ಚುತ್ತಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಇದು ಆತಂಕಕಾರಿಯಾಗಿದೆ' ಎಂದು ಫೀಸಾ ಅಧ್ಯಕ್ಷ ಅಮಿತ್ ಮೆಂಘಾನಿ ತಿಳಿಸಿದ್ದಾರೆ. ಮೆಲ್ಬೋರ್ನ್ ಪಶ್ಚಿಮ ಉಪನಗರಗಳಲ್ಲಿ ದರೋಡೆಗೆ ಒಳಗಾದ ಬಲಿಪಶುಗಳಲ್ಲಿ ಶೇ.30ರಷ್ಟು ಭಾರತೀಯರಾಗಿದ್ದು, ಅಂಗಡಿಯೊಂದರಲ್ಲಿ ನಡೆದ ಸಶಸ್ತ್ರ ದರೋಡೆಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಪ್ರಜ್ಞಾಹೀನನಾದ ಬಳಿಕ ಪೊಲೀಸರು ಸಮುದಾಯ ಸಂಪರ್ಕ ಗುಂಪನ್ನು ಸ್ಥಾಪಿಸಿದೆ.
ಆದರೆ ಈ ದಾಳಿಗಳಿಗೆ ಜನಾಂಗೀಯ ಪ್ರೇರಣೆಯನ್ನು ಪೊಲೀಸರು ತಳ್ಳಿಹಾಕಿದ್ದು, ತಮ್ಮ ವಿದ್ಯಾಭ್ಯಾಸಕ್ಕೆ ಒತ್ತಾಸೆಯಾಗಲು ತಡರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳು ತಪ್ಪು ಸ್ಥಳದಲ್ಲಿ ತಪ್ಪು ಸಂದರ್ಭದಲ್ಲಿರುತ್ತಾರೆಂದು ಹೇಳಿದರು. ಜನಾಂಗೀಯ ದ್ವೇಷದ ಕಾರಣದ ಮೇಲೆ ಭಾರತೀಯರು ಹಿಂಸೆಗೆ ಗುರಿಯಾಗುತ್ತಿರುವುದಕ್ಕೆ ಪುಷ್ಠಿ ನೀಡುವಂತ ಸಾಕ್ಷ್ಯಾಧಾರವಿಲ್ಲವೆಂದು ಸಮುದಾಯ ಸಂಪರ್ಕ ಸಮೂಹದ ಉದ್ಘಾಟನೆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಸ್ಕಾಟ್ ಮಹೋನಿ ತಿಳಿಸಿದರು. |