ತಾಲಿಬಾನ್ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರಿದರೆ ಕಾನೂನು ರೂಪಕರ ಕುಟುಂಬಗಳನ್ನು ಕೊಲ್ಲುವುದಾಗಿ ತಾಲಿಬಾನ್ ಬೆದರಿಕೆಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಖಂಡಿಸಿದ್ದು, ಈ ರಾಜಕಾರಣಿಗಳಿಗೆ ಸಂಪೂರ್ಣ ರಕ್ಷಣೆ ನೀಡಿ, ಭಯೋತ್ಪಾದಕತೆ ವಿರುದ್ಧ ಯುದ್ಧದಲ್ಲಿ ವಿಜಯವನ್ನು ಖಾತರಿಮಾಡುವುದಾಗಿ ಶಪಥ ತೊಟ್ಟಿದ್ದಾರೆ.
ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಿಲ್ಲದಿದ್ದರೆ, ವಾಯವ್ಯ ಪ್ರದೇಶದಲ್ಲಿ ಸಂಸದರ ಮಕ್ಕಳನ್ನು ಅಪಹರಿಸಿ, ಕುಟುಂಬಗಳನ್ನು ಹತ್ಯೆ ಮಾಡುವುದಾಗಿ ತಾಲಿಬಾನ್ ಹೆದರಿಸಿದೆಯೆಂದು ಗಿಲಾನಿ ಹೇಳಿದರು. ಇಂತಹ ಬೆದರಿಕೆಗಳನ್ನು ಖಂಡಿಸಿದ ಅವರು, ಸದಸ್ಯರಿಗೆ ಪೂರ್ಣ ರಕ್ಷಣೆ ನೀಡುವುದಾಗಿ ಹೇಳಿದರು.
ಸಂಸದರಿಗೆ ತಾಲಿಬಾನಿಗಳು ಬೆದರಿಕೆ ಹಾಕಿರುವುದು ಸರ್ಕಾರ ಮತ್ತು ಸಂವಿಧಾನಕ್ಕೆ ಉಗ್ರರು ತಲೆಬಾಗುವುದಿಲ್ಲವೆಂದು ತೋರಿಸುತ್ತದೆಂದು ಸಂಸತ್ತಿನ ಕೆಳಮನೆ ಅಥವಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರು ಬುನೇರ್, ದಿರ್ ಮತ್ತು ಸ್ವಾತ್ ಜಿಲ್ಲೆಗಳಲ್ಲಿ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಕುರಿತು ಚರ್ಚೆಯಲ್ಲಿ ಮಾತನಾಡುತ್ತಾ ಹೇಳಿದರು.
ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಮಲಕಾಂಡ್ ವಿಭಾಗದ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರಿಗೆ ಎಚ್ಚರಿಕೆ ನೀಡುತ್ತಾ, ಮೂರು ದಿನಗಳಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.ಇಲ್ಲದಿದ್ದರೆ ನಾವು ಅವರ ಕುಟುಂಬಗಳನ್ನು ಬಂಧಿಸಿ, ಅವರ ಕಟ್ಟಡವನ್ನು ನಾಶ ಮಾಡುವುದಾಗಿ ತಿಳಿಸಿದ್ದಾನೆ. |