ನೇಪಾಳದಲ್ಲಿ ಸಿಪಿಎನ್-ಯುಎಂಎಲ್ ಎಡಪಂಥೀಯ ನಾಯಕ ಮಾಧವ್ ಪಟೇಲ್ 601 ಸಂಸತ್ ಸದಸ್ಯರಲ್ಲಿ 290 ಸಂಸದರ ಸಹಿ ಸಂಗ್ರಹಿಸುವ ಮೂಲಕ ನೂತನ ಸರ್ಕಾರ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
290 ಸದಸ್ಯರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತಿಗೆ ಕೇವಲ 11 ಸದಸ್ಯರ ಕೊರತೆಯನ್ನು ಅವರು ಎದುರಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಪ್ರಚಂಡ ರಾಜೀನಾಮೆ ಬಳಿಕ ಮಾವೋವಾದಿಗಳು ಸಂಸತ್ತಿಗೆ ತಡೆ ವಿಧಿಸಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ನೇಪಾಳದ ಸಂವಿಧಾನಿಕ ಅಸೆಂಬ್ಲಿಯಲ್ಲಿ ಪ್ರಮುಖ ಶಕ್ತಿಯಾಗಿರುವ ಮಾವೋವಾದಿಗಳು ತಮ್ಮ ಬೆಂಬಲವಿಲ್ಲದೇ ಯಾವುದೇ ನೂತನ ಸರ್ಕಾರ ರಚನೆಯ ವಿರುದ್ಧ ಸವಾಲು ಒಡ್ಡಿದ್ದಾರೆ.
ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಮತ್ತು ತೆರೈ ಮಾದೇಶಿ ಪ್ರಜಾಪ್ರಭುತ್ವ ಪಕ್ಷದ ಬೆಂಬಲ ಗಳಿಸಿರುವ ನೂತನ ಸರ್ಕಾರ ರಚನೆಗೆ ಕೀಲಿಕೈಯಾಗಿರುವ ಮಾದೇಶಿ ಜನತಾ ಹಕ್ಕು ವೇದಿಕೆ ಬೆಂಬಲಕ್ಕೆ ಇನ್ನೂ ಮನಸ್ಸು ಮಾಡಬೇಕಾಗಿದೆ. 53 ಸದಸ್ಯಬಲವಿರುವ ಎಂಆರ್‌ಪಿಎಫ್ ಪಕ್ಷವು ಅಂತಿಮ ನಿರ್ಧಾರಕ್ಕಾಗಿ ಇಂದು ಸೇರಿದಾಗ ಸರ್ಕಾರ ರಚನೆಗೆ ಉತ್ತೇಜನ ಸಿಗುತ್ತದೆ. |