ಪ್ರಜಾಪ್ರಭುತ್ವ ಪರ ಜನರ ಕಣ್ಮಣಿ ಆಂಗ್ ಸಾನ್ ಸೂಕಿಯ ವಿರುದ್ಧ ಮ್ಯಾನ್ಮಾರ್ ಮಿಲಿಟರಿ ಜುಂಟಾ ಹೊಸ ಆರೋಪಗಳನ್ನು ಮಾಡಿದ್ದರಿಂದ ತಾವು ತೀವ್ರ ಕಳವಳಪಟ್ಟಿದ್ದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.
ಸೂಕಿಯ ಸರೋವರದ ಅಂಚಿನ ಮನೆಗೆ ಈಜಿಕೊಂಡು ಅಮೆರಿಕನ್ ಆಗಮಿಸಿದ ಘಟನೆಗೆ ಸಂಬಂಧಿಸಿದಂತೆ ಸೂಕಿಯು ಗೃಹಬಂಧನದ ನಿಯಮಗಳನ್ನು ಮುರಿದಿದ್ದಾರೆಂದು ಜುಂಟಾ ಆರೋಪ ಹೊರಿಸಿದ ಬಳಿಕ ಅಂತಾರಾಷ್ಟ್ರೀಯ ಖಂಡನೆಯ ಕೂಗು ಕೇಳಿಬಂದಿದ್ದು ಇದಕ್ಕೆ ಕ್ಲಿಂಟನ್ ಕೂಡ ದನಿಗೂಡಿಸಿದ್ದಾರೆ.
ನಿರಾಧಾರ ಅಪರಾಧಕ್ಕಾಗಿ ಸೂಕಿಯ ಮೇಲೆ ಆರೋಪ ಹೊರಿಸಿದ ಬರ್ಮ ಸರ್ಕಾರದ ನಿರ್ಧಾರದಿಂದ ತಾವು ತೀವ್ರ ವಿಚಲಿತರಾಗಿದ್ದಾಗಿ ಮಲೇಶಿಯ ವಿದೇಶಾಂಗ ಸಚಿವ ಡಾಟಕ್ ಅನಿಫಾಬ್ ಬಿನ್ ಹಾಜಿ ಅಮಾನ್ ಜತೆ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರ ಜತೆ ಮಾತನಾಡುತ್ತಾ ಕ್ಲಿಂಟನ್ ನುಡಿದರು. ಈ ಘಟನೆಯನ್ನು ಸೂಕಿ ಮೇಲೆ ಅಸಮರ್ಥನೀಯ ನಿರ್ಬಂಧ ಹೇರುವುದಕ್ಕೆ ಬಳಸುವ ಆಡಳಿತ ಪ್ರಯತ್ನಗಳಿಗೆ ತಾವು ವಿರೋಧಿಸುವುದಾಗಿ ಅವರು ನುಡಿದರು.
ಸೂಕಿಯವನ್ನು ತಕ್ಷಣೇ ಭೇಷರತ್ತಾಗಿ ಬಿಡುಗಡೆ ಮಾಡುವಂತೆಯೂ ಅವರು ಕರೆ ನೀಡಿದ್ದಾರೆ. ಮಿಲಿಟರಿ ಜುಂಟಾ ಮೇಲೆ ಬಲವಾದ ಪ್ರಭಾವ ಹೊಂದಿರುವ ಚೀನಾ ಜತೆ ಸೂಕಿ ವಿಚಾರ ಪ್ರಸ್ತಾಪಿಸಲು ಬಯಸುವುದಾಗಿ ಅವರು ಹೇಳಿದ್ದಾರೆ. |