ಹಂದಿ ಜ್ವರದ 6500 ಪ್ರಯೋಗಶಾಲೆಯಲ್ಲಿ ದೃಢಪಟ್ಟ ಪ್ರಕರಣಗಳು 33 ರಾಷ್ಟ್ರಗಳಲ್ಲಿ ವರದಿಯಾಗಿವೆಯೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, ಹಂದಿಜ್ವರದಿಂದ ಸತ್ತವರ ಸಂಖ್ಯೆ 65ಕ್ಕೇರಿದ್ದಾಗಿ ಹೇಳಿದೆ.
ಹಂದಿ ಜ್ವರದ ಹರಡುವ ಆರಂಭದಲ್ಲಿ ಉತ್ತರ ಅಮೆರಿಕದಿಂದ ಬಹುತೇಕ ಪ್ರಕರಣಗಳು ವರದಿಯಾಗಿರುವುದು ನಿಜ ಎಂದು ಡಬ್ಲ್ಯುಎಚ್‌ಒ ಸಹಾಯಕ ಪ್ರಧಾನ ನಿರ್ದೇಶಕ ಡಾ. ಕೈಜಿ ಫುಕುಡೊ ತಿಳಿಸಿದರು. ಅಮೆರಿಕದಲ್ಲಿ 3352 ಅತ್ಯಧಿಕ ಪ್ರಕರಣಗಳು ಮತ್ತು ಮೆಕ್ಸಿಕೊದಲ್ಲಿ 2446 ಪ್ರಕರಣಗಳು ಮತ್ತು ಕೆನಡಾದಲ್ಲಿ 389 ಪ್ರಕರಣಗಳು ವರದಿಯಾಗಿವೆ.
ಈ ಪ್ರಕರಣದಿಂದಾಗಿ ಹಂದಿ ಜ್ವರದಿಂದ ಸತ್ತವರ ಸಂಖ್ಯೆ ಅಮೆರಿಕದಲ್ಲಿ ನಾಲ್ಕಕ್ಕೇರಿದ್ದು, ವಿಶ್ಯಾದ್ಯಂತ 70 ಮಂದಿ ಬಲಿಯಾಗಿದ್ದಾರೆ. ಏತನ್ಮಧ್ಯೆ, ಅರಿಜೋನಾದಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಅಮೆರಿಕದಲ್ಲಿ ಹಂದಿ ಜ್ವರಕ್ಕೆ ಬಲಿಯಾದ ನಾಲ್ಕನೇ ವ್ಯಕ್ತಿಯೆನಿಸಿದ್ದಾರೆ. 40ರ ಆಸುಪಾಸಿನಲ್ಲಿದ್ದ ಮಹಿಳೆಗೆ ಕಳೆದ ವಾರ ಜ್ವರದ ಸೋಂಕು ಕಾಣಿಸಿಕೊಂಡಿತ್ತು.
ಹಂದಿ ಜ್ವರ ಸೋಂಕಿನಿಂದ ಸಿಬ್ಬಂದಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಅದಕ್ಕೆ ಪ್ರತಿಕ್ರಿಯೆಯಾಗಿ ಮೂರು ಶಾಲೆಗಳನ್ನು ಮುಚ್ಚಿ ಫ್ಲೂ ಲಕ್ಷಣಗಳಿರುವ ನೂರಾರು ಮಕ್ಕಳನ್ನು ಮನೆಗೆ ಕಳಿಸಿದ್ದಾಗಿ ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ತಿಳಿಸಿದ್ದಾರೆ. |