ಈಶಾನ್ಯ ಶ್ರೀಲಂಕಾದಲ್ಲಿ ತಮಿಳು ಬಂಡುಕೋರರ ಹಿಡಿತದಲ್ಲಿರುವ ಸಣ್ಣಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಎಲ್ಲ ನಾಗರಿಕರನ್ನು ಮುಂದಿನ 48 ಗಂಟೆಗಳಲ್ಲಿ ರಕ್ಷಿಸುವುದಾಗಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ತಿಳಿಸಿದ್ದಾಗಿ ಸರ್ಕಾರಿ ಮಾಹಿತಿ ಇಲಾಖೆ ಶುಕ್ರವಾರ ವರದಿ ಮಾಡಿದೆ.ಜೋರ್ಡಾನ್‌ಗೆ ಅಧಿಕೃತ ಭೇಟಿ ನೀಡಿದ್ದ ರಾಜಪಕ್ಷೆ ಶ್ರೀಲಂಕನ್ನರ ಜತೆ ಗುರುವಾರ ರಾತ್ರಿ ಮಾತನಾಡುತ್ತಾ ಮೇಲಿನ ವಿಷಯ ತಿಳಿಸಿದ್ದಾಗಿ ಇಲಾಖೆ ವರದಿ ಮಾಡಿದೆ. ಸಾವಿರಾರು ತಮಿಳು ನಾಗರಿಕರು ಮಿಲಿಟರಿ ನಿಯಂತ್ರಿತ ಪ್ರದೇಶದತ್ತ ಸರೋವರವೊಂದರ ಮೂಲಕ ಸಾಗುತ್ತಿದ್ದಂತೆ ಹಾಗೂ ಪಡೆಗಳು ಬಂಡುಕೋರ ಹಿಡಿತದ ಪ್ರದೇಶಕ್ಕೆ ಎಲ್‌ಟಿಟಿಇ ಪ್ರತಿರೋಧದ ನಡುವೆ ಮುನ್ನುಗ್ಗುತ್ತಿದ್ದಂತೆ ರಾಜಪಕ್ಷೆ ಪ್ರತಿಕ್ರಿಯೆ ಹೊರಬಿದ್ದಿದೆ.ಮುಲೈತಿವು ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಪಡೆಗಳ ಜತೆ ಮುಂಚೂಣಿಯಲ್ಲಿ ಠಿಕಾಣಿ ಹೂಡಿರುವ ಶ್ರೀಲಂಕಾ ರೂಪವಾಹಿನಿ ಟೆಲಿವಿಷನ್ ವರದಿಗಾರರೊಬ್ಬರು, ಬಂಡುಕೋರ ಹಿಡಿತ ಪ್ರದೇಶದಲ್ಲಿ ಭಾರೀ ಆಸ್ಫೋಟನೆಗಳು ಕೇಳಿಬರುತ್ತಿದ್ದು, ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದ್ದಾಗಿ ವರದಿಯಲ್ಲಿ ತಿಳಿಸಿದ್ದಾರೆ. ಎಲ್‌ಟಿಟಿಇ ನಾಯಕತ್ವ ಇರುವರೆಂದು ಶಂಕಿಸಲಾದ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿದ್ದಾಗಿ ಅವರು ಹೇಳಿದ್ದಾರೆ.ಕರಾವಳಿ ಪ್ರದೇಶದಲ್ಲಿ ಸ್ವತಃ ತಮ್ಮ ಮಿಲಿಟರಿ ಸಾಮಗ್ರಿಗಳನ್ನು ಭಯೋತ್ಪಾದಕರು ಸ್ಫೋಟಿಸುತ್ತಿರಬಹುದೆಂದು ಅವರು ಶಂಕಿಸಿದ್ದಾರೆ. ಮಿಲಿಟರಿ ಗುಪ್ತಚರ ಮಾಹಿತಿ ಪ್ರಕಾರ, ವೇಲುಪಿಳ್ಳೈ ಪ್ರಭಾಕರನ್, ಅವರ ಡೆಪ್ಯೂಟಿ ಪೊಟ್ಟು ಅಮ್ಮಾನ್ ಇನ್ನೂ ಆ ಪ್ರದೇಶದಲ್ಲಿದ್ದಾರೆಂದು ಅವರು ಶಂಕಿಸಿದ್ದಾರೆ. |