ಇರಾನ್ ಜೈಲಿನಿಂದ ಈ ವಾರ ಬಿಡುಗಡೆಯಾದ ಅಮೆರಿಕ ಸಂಜಾತ ವರದಿಗಾರ್ತಿ ರೊಕ್ಸಾನಾ ಸಬೇರಿ ಶುಕ್ರವಾರ ಇಸ್ಲಾಮಿಕ್ ಗಣರಾಜ್ಯವನ್ನು ತ್ಯಜಿಸಿ ಅಜ್ಞಾತ ಸ್ಥಳವೊಂದಕ್ಕೆ ತೆರಳಿದ್ದಾರೆ.
ರೊಕ್ಸಾನಾ ಅವರಿದ್ದ ವಿಮಾನ ನಿರ್ಗಮಿಸುತ್ತಿದ್ದಂತೆ, ರೊಕ್ಸಾನಾ ಮತ್ತು ಅವರ ಪೋಷಕರು ಟೆಹರಾನ್ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಿಂದ ತಮ್ಮ ಜತೆ ಪ್ರಯಾಣಿಸುತ್ತಿದ್ದಾರೆಂದು ಅವರ ಕುಟುಂಬದ ಸ್ನೇಹಿತ ಪಯಾಂ ಮೊಹೇಬಿ ತಿಳಿಸಿದ್ದಾರೆ. ಇರಾನ್‌ನಿಂದ ನಿಖರವಾಗಿ ಯಾವ ಸ್ಥಳಕ್ಕೆ ತೆರಳುತ್ತಿದ್ದಾರೆಂದು ಅವರು ಹೇಳಿಲ್ಲ. ಆದರೆ ಸಬೇರಾ ಬಿಡುಗಡೆಯಾದ ತಕ್ಷಣವೇ ಅವರನ್ನು ಅಮೆರಿಕಕ್ಕೆ ಹಿಂತಿರುಗಿ ಕರೆದೊಯ್ಯಲು ಸಿದ್ಧವಿರುವುದಾಗಿ ಅವರ ಕುಟುಂಬ ಹೇಳಿದೆ.
ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ನೇರ ವಿಮಾನ ಹಾರಾಟವಿಲ್ಲ ಎಂದು ಮೊಹೆಬಿ ತಿಳಿಸಿದ್ದು, ರೊಕ್ಸಾನಾ ಸಂತೋಷವಾಗಿದ್ದಾರೆಂದು ಹೇಳಿದ್ದಾರೆ. ಇರಾನ್‌ಗೆ ಪುನಃ ಆಗಮಿಸುವ ಬಗ್ಗೆ ಸ್ಪಷ್ಟ ಯೋಜನೆ ಈ ಕ್ಷಣದಲ್ಲಿ ಅವರಿಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ 8 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದ ಸಬೇರಿಗೆ ಅಪೀಲು ನ್ಯಾಯಾಲಯ 2 ವರ್ಷಗಳ ಅಮಾನತಾದ ಶಿಕ್ಷೆಗೆ ಇಳಿಸಿದ ಬಳಿಕ ಸೋಮವಾರ ಸಬೇರಿಯನ್ನು ಬಿಡುಗಡೆ ಮಾಡಲಾಯಿತು. ಸಬೇರಿಯ ಎರಡು ವರ್ಷಗಳ ಜೈಲುಶಿಕ್ಷೆಯನ್ನು 5 ವರ್ಷದವರೆಗೆ ಅಮಾನತಿನಲ್ಲಿರಿಸಬಹುದು ಎಂದು ಇರಾನ್ ನ್ಯಾಯಾಂಗ ತಿಳಿಸಿದೆ |