ಅವಳಿ ಎಂಜಿನ್ ವಿಮಾನವೊಂದು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 6 ಜನರು ಗುರುವಾರ ಸತ್ತಿದ್ದಾರೆಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಸಣ್ಣ ವಿಮಾನವು ಬೆಲಿಜೆ ಕಡೆ ದಕ್ಷಿಣಾಭಿಮುಖವಾಗಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿತೆಂದು ನಾಗರಿಕ ವಿಮಾನಯಾನ ಕಚೇರಿಯ ಮುಖ್ಯಸ್ಥ ತಿಳಿಸಿದ್ದಾರೆ. ಅದು ಎಂಜಿನ್ ವೈಫಲ್ಯ ಅಥವಾ ಪೈಲಟ್ ಪ್ರಮಾದವೋ ಎನ್ನುವುದು ತಿಳಿದುಬಂದಿಲ್ಲ.
ಆದರೆ ವಿಮಾನವು ಮೇಲೆ ಹಾರಿದಾಗ ಮಳೆ ಬೀಳುತ್ತಿತ್ತೆಂದು ಅವರು ಹೇಳಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ವಿಮಾನವು ನಿಲ್ದಾಣದಿಂದ 500 ಮೀಟರುದೂರದ ಮನೆಯೊಂದಕ್ಕೆ ಡಿಕ್ಕಿಹೊಡೆದಿದ್ದರಿಂದ ಬೆಂಕಿ ಭುಗಿಲೆದ್ದು ಮನೆಯ ಕೆಲವು ಭಾಗ ಸುಟ್ಟುಹೋಗಿದೆ. ಈ ಅಪಘಾತದಲ್ಲಿ ಪೈಲಟ್ ಮತ್ತು ವಿಮಾನದ ಐವರು ಪ್ರಯಾಣಿಕರು ಅಸುನೀಗಿದ್ದಾರೆಂದು ಕಾರ್ಲೋಸ್ ತಿಳಿಸಿದ್ದಾರೆ. |