ಸರ್ಕಾರಿ ಪಡೆಗಳು ಮತ್ತು ತಾಲಿಬಾನ್ ನಡುವೆ ಸ್ವಾತ್ ಕಣಿವೆಯಲ್ಲಿ ತೀವ್ರ ಹೋರಾಟ ನಡೆಯುತ್ತಿದ್ದು, ಮಿಲಿಟರಿಯು ಕರ್ಫ್ಯೂ ಸಡಿಲಿಸಿದ್ದರಿಂದ ಸಾವಿರಾರು ಜನರು ಮನೆಗಳನ್ನು ತೆರವು ಮಾಡಿದರು.
ಸ್ವಾಟ್ ಮುಖ್ಯಪಟ್ಟಣ ಮಿಂಗೋರಾ ಮತ್ತು ಸಮೀಪದ ಜಿಲ್ಲೆಗಳಾದ ಕಾಂಜು ಮತ್ತು ಕಾಬಾಲ್‌ನಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ನಿವಾಸಿಗಳಿಗೆ ಸ್ಥಳವನ್ನು ತೆರವು ಮಾಡುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆಂದು ಸ್ಥಳೀಯ ಆಡಳಿತದ ಮುಖ್ಯಸ್ಥರು ತಿಳಿಸಿದ್ದಾರೆ. ಜನರು ಖಾಸಗಿ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋಗುತ್ತಿದ್ದು,ಜನರ ಸಾಗಣೆಗೆ ಸುಮಾರು 150 ಬಸ್‌ಗಳಿಗೆ ವಿಶೇಷ ಪಾಸ್‌ಗಳನ್ನು ಸಹ ಸೇನೆ ವಿತರಿಸಿದೆ.
ಭಾನುವಾರ ಕರ್ಫ್ಯೂ ಸಡಿಲಿಸಿದ್ದಾಗ ಒಂದು ಲಕ್ಷ ಜನರು ಸ್ಥಳಾಂತರ ಮಾಡಿದ ಬಳಿಕ ಮಿಂಗೋರಾದಲ್ಲಿ ಸುಮಾರು 2 ಲಕ್ಷ ಜನರು ಗುಳೆ ಹೋಗಿದ್ದಾರೆಂದು ಮಿಲಿಟರಿ ಅಂದಾಜು ಮಾಡಿದೆ. ಸೇನೆಯ ಫಿರಂಗಿಗಳು ಬಂಡುಕೋರರ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದು, ಇದುವರೆಗೆ ಸುಮಾರು 8,34,000 ನಾಗರಿಕರು ಸ್ಥಳಾಂತರ ಮಾಡಿದ್ದಾರೆಂದು ಹೇಳಲಾಗಿದೆ.
ನಿರಾಶ್ರಿತರಿಗೆ ಆತುರಾತುರವಾಗಿ ನಿರ್ಮಿಸಿದ ಶಿಬಿರಗಳಲ್ಲಿ ಆಶ್ರಯನೀಡಲಾಗಿದ್ದು, ಪ್ರಕೃತಿಸೌಂದರ್ಯದ ಸ್ವಾತ್ ಕಣಿವೆಯನ್ನು ಉಗ್ರಗಾಮಿಗಳ ಹಿಡಿತದಿಂದ ತಪ್ಪಿಸುವ 20 ದಿನಗಳ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾಗಿ ಪಾಕಿಸ್ತಾನ ಹೇಳಿದೆ. |