ನೇಪಾಳದಲ್ಲಿ ಉದ್ಭವಿಸಿರುವ ರಾಜಕೀಯ ಅನಿಶ್ಚಿತತೆಗೆ ಹೊಸ ತಿರುವು ಮೂಡಿದ್ದು, ಸರ್ಕಾರ ರಚನೆಗೆ ಕೀಲಿಕೈಯಾಗಿರುವ ಮಾದೇಶಿ ಪಕ್ಷವು ಮುಂದಿನ ಆಡಳಿತದ ನೇತೃತ್ವ ವಹಿಸಲು ಹಕ್ಕುಪ್ರತಿಪಾದಿಸುವುದಾಗಿ ಘೋಷಿಸಿದೆ.
ಇದರಿಂದ ಸರ್ಕಾರ ರಚನೆಗೆ ಮುಂಚೂಣಿ ಪಕ್ಷವಾಗಿರುವ ಸಿಪಿಎನ್-ಯುಎಂಎಲ್ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆ. 601 ಸದಸ್ಯಬಲದ ಸಂವಿಧಾನಿಕ ಅಸೆಂಬ್ಲಿಯಲ್ಲಿ 53 ಸೀಟುಗಳೊಂದಿಗೆ ದೊಡ್ಡಪಕ್ಷವಾಗಿರುವ ಮಾದೇಶಿ ಜನತಾ ಹಕ್ಕು ವೇದಿಕೆಯು ಸಮ್ಮಿಶ್ರ ಸರ್ಕಾರ ಸ್ಛಾಪನೆಗೆ 2 ಆಯ್ಕೆಗಳನ್ನು ಸೂಚಿಸಿದೆ.
ನಾವು ನಮ್ಮ ನಾಯಕತ್ವದಲ್ಲಿ ಸರ್ಕಾರ ರಚಿಸುತ್ತೇವೆ ಅಥವಾ ಸಿಪಿಎನ್-ಯುಎಂಎಲ್ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತೇವೆ. ಆದರೆ ಮುಂದಿನ ಆಡಳಿತದ ನೇತೃತ್ವ ವಹಿಸುವುದು ತಮ್ಮ ಪ್ರಥಮ ಆದ್ಯತೆಯೆಂದು ಪಕ್ಷದ ಕೇಂದ್ರೀಯ ಸದಸ್ಯ ರಾಮೇಶ್ವರ ರಾವ್ ಯಾದವ್ ತಿಳಿಸಿದ್ದಾರೆ.
ಸಿಪಿಎನ್-ಯುಎಂಎಲ್‌ನ ಮಾದವ್ ನೇಪಾಳ್ ಮುಂದಿನ ಪ್ರಧಾನಿ ಆಗುವುದನ್ನು ತಪ್ಪಿಸಲು ಮಾದೇಶಿ ಪಕ್ಷದ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸುವುದಾಗಿ ಮಾವೋವಾದಿಗಳು ಔಪಚಾರಿಕ ಭರವಸೆ ನೀಡಿದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮಾವೋವಾದಿ-ಎಂಆರ್‌ಪಿಎಫ್ ಕೂಟಕ್ಕೆ 291 ಸೀಟುಗಳ ಬಲವಿದ್ದು, ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಸಿಪಿಎಂ-ಯುಎಂಎಲ್ ನಾಯಕ ಮಾಧವ್ ನೇಪಾಳ್ ನೂತನ ಸರ್ಕಾರ ರಚನೆಗೆ 290 ಸದಸ್ಯರ ಸಹಿ ಸಂಗ್ರಹಿಸಿದ ಬಳಿಕ ಯಾದವ್ ಪ್ರತಿಕ್ರಿಯೆ ಹೊರಬಿದ್ದಿದೆ. |