ಶತಮಾನಗಳಷ್ಟು ಪ್ರಾಚೀನವಾದ ಪಶುಪತಿನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬಯಸಿದ್ದರೂ ಅಲ್ಲಿಗೆ ಭೇಟಿ ಕೊಡಲಾಗುತ್ತಿಲ್ಲವೇ? ಅಲ್ಲಿಗೆ ಭೇಟಿ ಕೊಡಲಾಗದಿದ್ದರೂ ಚಿಂತೆಯಿಲ್ಲ. ಆನ್‌ಲೈನ್ ಮೂಲಕ ಪಶುಪತಿನಾಥ ಮಂದಿರದಲ್ಲಿ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಪ್ರಥಮ ಬಾರಿಗೆ ಆಡಳಿತವು ಇಂಟರ್‌ನೆಟ್ ಪೂಜೆಗೆ ವ್ಯವಸ್ಥೆ ಮಾಡಿದ್ದು, ಶೀಘ್ರದಲ್ಲೇ ಅದು ಆರಂಭವಾಗಲಿದೆ ಎಂದು ದೇವಸ್ಥಾನ ವ್ಯವಹಾರಗಳನ್ನು ನಿಭಾಯಿಸುತ್ತಿರುವ ಪಶುಪತಿ ಪ್ರದೇಶ ಅಭಿವೃದ್ಧಿ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪರ್ಮಾನಂದ ಶಕ್ಯ ತಿಳಿಸಿದ್ದಾರೆ.
ಭಕ್ತರು ಕ್ರೆಡಿಟ್ ಕಾರ್ಡ್ ಮೂಲಕ ಅಗತ್ಯ ಮೊತ್ತವನ್ನು ಪಾವತಿ ಮಾಡಿ ಇಂಟರ್‌ನೆಟ್‌ನಲ್ಲಿ ತಮ್ಮ ಪ್ರಾರ್ಥನೆಯನ್ನು ದಾಖಲಿಸಬಹುದೆಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಸಾದ ಮತ್ತು ಹೂವುಗಳನ್ನು ಗ್ರಾಹಕರಿಗೆ ಕೊರಿಯರ್ ಮೂಲಕ ಕಳಿಸಿಕೊಡಲಾಗುತ್ತದೆಂದು ಅವರು ಹೇಳಿದ್ದಾರೆ. ಇದರಿಂದ ಪಶುಪತಿನಾಥ ಮಂದಿರ ವಿಶ್ವಾದ್ಯಂತ ಭಕ್ತರ ಪೂಜೆಗೆ ಮುಕ್ತವಾಗಿ ಅವಕಾಶ ಕಲ್ಪಿಸಿದಂತಾಗಿದೆ. |