ತನ್ನ ರಾಷ್ಟ್ರದ ಕಾನೂನಿನ ಅಡಿಯಲ್ಲಿ ಸೊಮಾಲಿ ಕಡಲ್ಗಳ್ಳರಿಗೆ ಶಿಕ್ಷೆ ವಿಧಿಸಲು ರಷ್ಯಾ ಯೋಜಿಸಿದೆಯೆಂದು ರಷ್ಯಾದ ಉಪ ಪ್ರಾಸಿಕ್ಯೂಟರ್ ಜನರಲ್ ಅಲೆಕ್ಸಾಂಡರ್ ವ್ಯಾಗಿಂಟ್‌ಸೆವ್ ತಿಳಿಸಿದ್ದಾರೆ.
ಸೊಮಾಲಿಯಲ್ಲಿ ಪರಿಣಾಮಕಾರಿ ಸರ್ಕಾರ ಇಲ್ಲದಿರುವುದರಿಂದ ಕಡಲ್ಗಳ್ಳರನ್ನು ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸುವುದು ಅರ್ಥಹೀನ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸೊಮಾಲಿಯಲ್ಲಿ ಕಾರ್ಯಾಚರಿಸುತ್ತಿರುವ ಕಡಲ್ಗಳ್ಳರು ಪ್ರಸಕ್ತ 17 ಹಡಗುಗಳು ಮತ್ತು 300 ಒತ್ತೆಯಾಳುಗಳನ್ನು ಹಿಡಿದಿಟ್ಟಿದ್ದಾರೆಂದು ಅವರು ಮಾಹಿತಿ ನೀಡಿದರು.
ಸೊಮಾಲಿ ಕಡಲ್ಗಳ್ಳರ ತನಿಖೆಗೆ ಅಂತಾರಾಷ್ಟ್ರೀಯ ಕಡಲ್ಗಳ್ಳರ ಕೋರ್ಟ್ ಸೃಷ್ಟಿಸುವ ಸಾಧ್ಯತೆ ಕುರಿತು ವಿದೇಶಿ ಸಹೋದ್ಯೋಗಿಗಳ ಜತೆ ಚರ್ಚಿಸಬೇಕೆಂದು ರಷ್ಯಾದ ಪ್ರಾಸಿಕ್ಯೂಟರ್‌ಗಳಿಗೆ ಅಧ್ಯಕ್ಷ ಮೆಡ್ವೆಡೆವ್ ಒತ್ತಾಯಿಸಿದ್ದಾರೆ. ಲೈಬೀರಿಯ ಧ್ವಜದ ಮತ್ತು ರಷ್ಯಾ ಸಿಬ್ಬಂದಿಯಿದ್ದ ಟ್ಯಾಂಕರ್ ಅಪಹರಿಸುವ ವಿಫಲ ಯತ್ನ ನಡೆಸಿದ 30 ಶಂಕಿತ ಕಡಲ್ಗಳ್ಳರನ್ನು ರಷ್ಯಾ ಸಮರನೌಕೆಯಲ್ಲಿ ಸೆರೆಹಿಡಿದ ಬಳಿಕ ಮೆಡ್ವೆಡೆವ್ ಒತ್ತಾಯ ಕೇಳಿಬಂದಿದೆ.
ಕಡಲ್ಗಳ್ಳರ ವಿಚಾರಣೆಗಾಗಿ ರಷ್ಯಾಗೆ ಒಯ್ಯಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯದ ಅಡಿಯಲ್ಲಿ ಮಾಸ್ಕೊ ಅರ್ಹತೆ ಹೊಂದಿದೆ. ನ್ಯೂಯಾರ್ಕ್‌ನಲ್ಲಿ ಶಂಕಿತ ಕಡಲ್ಗಳ್ಳನ ಶಿಕ್ಷೆಗೆ ಅಮೆರಿಕ ಈಗಾಗಲೇ ಕಾನೂನಿನ ಕ್ರಮ ಕೈಗೊಂಡಿದೆ. |