ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಹೋರಾಟಗಾರರು ತಮ್ಮ ಗಡ್ಡಗಳನ್ನು ಬೋಳಿಸಿಕೊಂಡು ಪಾಕಿಸ್ತಾನ ಸೇನೆಯ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆಂದು ಮಿಲಿಟರಿ ಶುಕ್ರವಾರ ತಿಳಿಸಿದೆ.
ಸ್ವಾತ್ ಕಣಿವೆಯಲ್ಲಿ ಸೇನೆಯು ತಾಲಿಬಾನ್ ಪ್ರಭಾವ ಹರಡುವುದನ್ನು ತಡೆಯಲು ಕಾರ್ಯಾಚರಣೆ ಆರಂಭಿಸಿದೆ. ಸೇನೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸುಮಾರು 9,00,000 ನಾಗರಿಕರು ಸ್ವಾತ್ ಕಣಿವೆಯನ್ನು ತೊರೆದಿದ್ದು, ಪಾಕಿಸ್ತಾನವು ಭಾರೀ ನೆರವು ಪಡೆಯದಿದ್ದರೆ ಮಾನವೀಯ ದುರಂತ ಸಂಭವಿಸಬಹುದೆಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಸ್ವಾತ್ ಕಣಿವೆಯ ವಿವಿಧ ಪ್ರದೇಶಗಳಲ್ಲಿ ಸಂಘರ್ಷ ಆರಂಭವಾಗಿದ್ದು, ತಾವು ಯಶಸ್ಸು ಗಳಿಸುತ್ತಿರುವುದಾಗಿ ಮಿಲಿಟರಿ ಹೇಳಿದ್ದು, ತಪ್ಪಿಸಿಕೊಳ್ಳಲು ಯತ್ನಿಸುವ ತಾಲಿಬಾನ್ ಹೋರಾಟಗಾರರನ್ನು ಗುರುತಿಸುವಂತೆ ನಾಗರಿಕರಿಗೆ ಮಿಲಿಟರಿ ಮನವಿ ಮಾಡಿದೆ.ತಾಲಿಬಾನ್ ಉಗ್ರರಲ್ಲಿ ಕೆಲವರು ಗಡ್ಡವನ್ನು ಬೋಳಿಸಿಕೊಂಡು ಕೂದಲು ಕತ್ತರಿಸಿಕೊಂಡು ಗುರುತುಸಿಗದಂತೆ ಪಲಾಯನ ಮಾಡುತ್ತಿದ್ದಾರೆಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಅಂತಹವರನ್ನು ಗುರುತಿಸುವಂತೆ ತಾವು ಸ್ವಾತ್ ಜನರಿಗೆ ಮನವಿ ಮಾಡಿರುವುದಾಗಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದ್ದು, ಮಾಹಿತಿದಾರರಿಗೆ ದೂರವಾಣಿ ಸಂಖ್ಯೆಯನ್ನು ಮತ್ತು ಸಂದೇಶ ಕಳಿಸಲು ಸೌಲಭ್ಯ ಒದಗಿಸಿದೆ. ತಾಲಿಬಾನ್ ಉಗ್ರರು ಸಾಮಾನ್ಯವಾಗಿ ಉದ್ದನೆಯ ಗಡ್ಡ ಮತ್ತು ಅನೇಕ ಮಂದಿ ಉದ್ದನೆಯ ತಲೆಕೂದಲು ಹೊಂದಿದ್ದು, ತಾಲಿಬಾನ್ ಗಡ್ಡಬೋಳಿಸಿಕೊಂಡು ತಪ್ಪಿಸಿಕೊಳ್ಳುತ್ತಿರುವ ಮಿಲಿಟರಿ ಹೇಳಿಕೆ ಕುರಿತು ತಕ್ಷಣದ ಪ್ರತಿಕ್ರಿಯೆಯನ್ನು ತಾಲಿಬಾನ್ ನೀಡಿಲ್ಲ. |