ಎಲ್‌ಟಿಟಿಇಗೆ ಭಾರೀ ಪೆಟ್ಟು ನೀಡಿರುವ ಶ್ರೀಲಂಕಾ ಪಡೆಗಳು ತಮಿಳು ವ್ಯಾಘ್ರಗಳ ಹಿಡಿತದಲ್ಲಿರುವ ಕಟ್ಟಕಡೆಯ ಕರಾವಳಿಪ್ರದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಎಲ್ಲ ಪಲಾಯನ ಮಾರ್ಗಗಳನ್ನು ಮುಚ್ಚಿದೆ.
ಎಲ್‌ಟಿಟಿಇ ಈಗ ಭದ್ರತಾಪಡೆಗಳಿಂದ ಸುತ್ತುವರಿದಿರುವ 1.5 ಚದರ ಕಿಮೀ ವ್ಯಾಪ್ತಿಯಲ್ಲಿ ಸೀಮಿತಗೊಂಡಿದೆ. ಶ್ರೀಲಂಕಾ ಸೇನೆಯ ಎರಡು ತುಕಡಿಗಳು ವಿವಿಧ ದಿಕ್ಕಿನಿಂದ ಒಂದು ಸ್ಥಳದಲ್ಲಿ ವಿಲೀನವಾಗಿ ಎಲ್‌ಟಿಟಿಇಯ ಮುಲ್ಲೈತಿವು ಕರಾವಳಿ ತೀರದಲ್ಲಿ ದಾಳಿ ನಡೆಸಿದ್ದರಿಂದ ಸಂಘರ್ಷದಲ್ಲಿ ಅನೇಕ ಬಂಡುಕೋರರು ಹತರಾಗಿದ್ದಾರೆ. ಗುಂಡು ಹಾರಾಟ ನಿಷೇಧ ವಲಯದಲ್ಲಿ ಉಗ್ರಗಾಮಿಗಳು ಕೇವಲ 1.5 ಕಿಮೀಗೆ ಸೀಮಿತಗೊಂಡಿದ್ದು, ಸೇನೆಯ ಮೂರು ತುಕಡಿಗಳಿಂದ ಸುತ್ತವರಿದಿದ್ದು, ಅವುಗಳಲ್ಲಿ ಎರಡು ತುಕಡಿಗಳು ವಿಲೀನಗೊಂಡಿವೆ.
ಎಲ್‌ಟಿಟಿಇ ನೌಕಾದಳದ ಕರ್ನಲ್ ಸೂಸೈ ಮತ್ತು ಪತ್ನಿ ದೋಣಿಯಲ್ಲಿ ದ್ವೀಪದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಶ್ರೀಲಂಕಾ ನೌಕಾದಳದ ಕೈಗೆ ಸಿಕ್ಕಿಬಿದ್ದ ಮಾರನೇ ದಿನವೇ ಮಿಲಿಟರಿ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದೆ. ಸೀ ಟೈಗರ್ಸ್ ಮುಖ್ಯಸ್ಥರಾದ ಸೂಸೈ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್‌ನ ನಿಕಟವರ್ತಿಯೆಂದು ಹೇಳಲಾಗಿದೆ. |