ವಾಯವ್ಯ ಪಾಕಿಸ್ತಾನದಲ್ಲಿ ಅಲ್ ಖಾಯಿದಾ ಭದ್ರನೆಲೆಯಲ್ಲಿರುವ ಇಸ್ಲಾಮಿಕ್ ಶಾಲೆಯ ಮೇಲೆ ಅಮೆರಿಕದ ಕ್ಷಿಪಣಿ ದಾಳಿಯಿಂದ ಇಬ್ಬರು ವಿದೇಶಿ ಶಂಕಿತ ಉಗ್ರಗಾಮಿಗಳು ಸೇರಿದಂತೆ 12 ಜನರು ಹತರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದರು.
ಸ್ವಾತ್ ಕಣಿವೆಯಲ್ಲಿ ಬೀಡುಬಿಟ್ಟಿರುವ ತಾಲಿಬಾನ್ ಉಗ್ರಗಾಮಿಗಳ ಮೇಲೆ ಪ್ರಹಾರಕ್ಕೆ ಪಾಕಿಸ್ತಾನ ಸೇನೆ ಸಿದ್ಧತೆ ನಡೆಸುತ್ತಿದ್ದಂತೆ ಅಮೆರಿಕದ ಕ್ಷಿಪಣಿ ದಾಳಿ ನಡೆದಿದೆ. ಪಾಕಿಸ್ತಾನದ ಕಾನೂನಿನರಹಿತ ಪ್ರದೇಶಗಳಲ್ಲಿ ಉಗ್ರಗಾಮಿಗಳ ಮೇಲೆ ಅಮೆರಿಕ ಪಡೆಗಳು ಬಾಂಬ್ ದಾಳಿ ನಡೆಸುತ್ತಿದ್ದು, ಉತ್ತರ ವಾಜಿರಿಸ್ತಾನ ಪಟ್ಟಣದ ಮಿರ್ ಅಲಿಯಲ್ಲಿ ಶನಿವಾರ ಬೆಳಿಗ್ಗೆ ಶಾಲೆ ಮತ್ತು ಸಮೀಪದ ವಾಹನದ ಮೇಲೆ ಅನೇಕ ಕ್ಷಿಪಣಿಗಳು ಅಪ್ಪಳಿಸಿದ್ದಾಗಿ ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದರು.
ಚಾಲಕರಿಲ್ಲದ ಡ್ರೋನ್ ವಿಮಾನಗಳ ಮೂಲಕ ಅಮೆರಿಕ ಪಡೆಗಳು ವಾಯವ್ಯ ಪಾಕಿಸ್ತಾನದಲ್ಲಿ ಹತ್ತಾರು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ದಾಳಿಗಳನ್ನು ಅಮೆರಿಕದ ಅಧಿಕಾರಿಗಳು ದೃಢಪಡಿಸುವುದು ಅಪರೂಪವಾಗಿದ್ದು, ಅಲ್ ಖಾಯಿದಾ ಕಮಾಂಡರ್‌ಗಳನ್ನು ಕೊಂದಿರುವುದಾಗಿ ಹೇಳುತ್ತಾರೆ.
ಈ ತಂತ್ರವನ್ನು ಪಾಕಿಸ್ತಾನ ಸರ್ಕಾರ ಬಹಿರಂಗವಾಗಿ ಟೀಕಿಸಿದ್ದು, ಇದರಿಂದ ನಾಗರಿಕರ ಸಾವು ನೋವು ಸಂಭವಿಸುತ್ತದಲ್ಲದೇ, ಉಗ್ರಗಾಮಿಗಳ ಜತೆ ಬುಡಕಟ್ಟು ಜನಾಂಗದ ಸಂಬಂಧ ಕಡಿಯುವ ಯತ್ನಕ್ಕೆ ಹಿನ್ನಡೆಯಾಗುತ್ತದೆಂದು ಹೇಳಿದೆ. |