ಪಾಕಿಸ್ತಾನದ ಪ್ರಕ್ಷುಬ್ಧ ಎನ್‌ಡಬ್ಲ್ಯುಎಫ್‌ಪಿಯಲ್ಲಿ ಹಿಂಸಾಚಾರ ಮೇರೆಮೀರಿದ್ದು, ಸ್ಫೋಟಕ ತುಂಬಿದ ಕಾರೊಂದು ಪೇಶಾವರದ ಹಳೆ ನಗರ ಕೇಂದ್ರದಲ್ಲಿ ಸ್ಫೋಟಿಸಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ 10 ಜನರನ್ನು ಬಲಿತೆಗೆದುಕೊಂಡಿದೆ.
ಈ ದಾಳಿಗೆ ಯಾವುದೇ ಗುಂಪು ಹೊಣೆ ಹೊತ್ತುಕೊಂಡಿಲ್ಲ. ಆದರೆ ಸ್ವಾತ್ ಮತ್ತು ಬುನೇರ್‌ನಲ್ಲಿ ಸೇನಾಕಾರ್ಯಾಚರಣೆ ಮತ್ತು ಬುಡಕಟ್ಟು ಪ್ರದೇಶದಲ್ಲಿ ಡ್ರೋನ್ ದಾಳಿಗಳಿಗೆ ಪ್ರತೀಕಾರವಾಗಿ ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ತಾಲಿಬಾನ್ ಮುಂತಾದ ಗುಂಪುಗಳು ಬೆದರಿಕೆ ಹಾಕಿದೆ.
ಪೇಶಾವರದ ಹಳೆ ಕೇಂದ್ರವಾದ ಕಾಕ್ಶಾಲ್‌ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳನ್ನು ಅಡಗಿಸಿಡಲಾಗಿದ್ದು, ಜನರಿಂದ ಪ್ರದೇಶ ಕಿಕ್ಕಿರಿದು ತುಂಬಿದ್ದಾಗ ಬಾಂಬ್ ಸ್ಫೋಟಿಸಿತೆಂದು ತಿಳಿದುಬಂದಿದೆ. ಸ್ಫೋಟದಿಂದಾಗಿ ಶಾಲಾ ಬಸ್ ಸೇರಿದಂತೆ ಅನೇಕ ವಾಹನಗಳು ಹಾನಿಯಾಗಿವೆ. ಸೈಬರ್ ಕೆಫೆ ಹೊರಗೆ ಸ್ಫೋಟಕ ತುಂಬಿದ ಕಾರನ್ನು ನಿಲ್ಲಿಸಲಾಗಿದ್ದು, ಸ್ಫೋಟದಿಂದ ತೀವ್ರ ಹಾನಿಗೊಳಲಾಗಿದೆ.
ಸ್ಫೋಟದಿಂದಾಗಿ ನಗರದಲ್ಲಿ ಭಯಭೀತ ವಾತಾವರಣ ಮೂಡಿದ್ದು, ಸ್ಫೋಟದ ಬಳಿಕ ಅನೇಕ ಮಂದಿ ಶಂಕಿತರನ್ನು ಬಂಧಿಸಿ ಅಜ್ಞಾತ ಸ್ಥಳವೊಂದಕ್ಕೆ ತನಿಖೆಗಾಗಿ ಕರೆದೊಯ್ಯಲಾಯಿತು. |