ಪಾಕಿಸ್ತಾನದ ವಾಯವ್ಯ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯು ರಾಷ್ಟ್ರದ ಉಳಿವಿಗಾಗಿ ಹೋರಾಟವಾಗಿದ್ದು ಅದನ್ನು ಗೆಲ್ಲಲೇಬೇಕಾಗಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಶುಕ್ರವಾರ ವರ್ಣಿಸಿದ್ದಾರೆ.
ಮಿಲಿಟರಿ ಕಾರ್ಯಾಚರಣೆಗೆ ಕೈಗೊಂಡ ನಿರ್ಧಾರ ಕಠಿಣವಾಗಿದ್ದು, ಉಗ್ರಗಾಮಿಗಳು ರಾಜ್ಯದೊಳಕ್ಕೆ ಇನ್ನೊಂದು ರಾಜ್ಯ ನಿರ್ಮಿಸಲು ಬಯಸಿದ್ದರೆಂದು ಗಿಲಾನಿ ಹೇಳಿದರು. ಪ್ರಧಾನಮಂತ್ರಿಗಳ ನಿವಾಸದಲ್ಲಿ ಪಾಕಿಸ್ತಾನದ ಮಾಧ್ಯಮದ ಸಂಪಾದಕರು ಮತ್ತು ಹಿರಿಯ ಪ್ರತಿನಿಧಿಗಳ ಜತೆ ಸಂವಾದದಲ್ಲಿ ಗಿಲಾನಿ ಮೇಲಿನ ವಿಷಯ ತಿಳಿಸಿದರು.ನಾವು ಅವರ ಚಟುವಟಿಕೆಗೆ ತಡೆಹಾಕದಿದ್ದರೆ ರಾಷ್ಟ್ರ ಅಪಾಯದ ಕೂಪದಲ್ಲಿ ಬೀಳುತ್ತಿತ್ತು.
ನಾವು ಸೋತರೆ ನಮ್ಮ ರಾಷ್ಟ್ರವನ್ನೇ ಕಳೆದುಕೊಳ್ಳುತ್ತೇವೆ. ಇದು ಪಾಕಿಸ್ತಾನಕ್ಕೆ ಅತೀ ಮುಖ್ಯವಾಗಿದೆ ಎಂದು ಅವರು ನುಡಿದರು. ಪಾಕಿಸ್ತಾನವು ತನ್ನ ಸಾರ್ವಬೌಮತೆಗಾಗಿ ಯುದ್ಧವನ್ನು ಹೂಡುತ್ತಿದ್ದು, ಸ್ವಾತ್ ಮತ್ತು ಮಲಕಾಂಡ್ ವಿಭಾಗದ ಪರಿಸ್ಥಿತಿ ಕುರಿತು ಅವರು ಮಾಧ್ಯಮಕ್ಕೆ ಮನದಟ್ಟು ಮಾಡಿದರು. |