ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಕಳೆದ 25ವರ್ಷಗಳಿಂದ ತಮಿಳು ಬಂಡುಕೋರರ ವಿರುದ್ಧ ನಡೆಯುತ್ತಿದ್ದ ಸಮರದ ವಿರುದ್ಧ ಲಂಕಾ ಸರ್ಕಾರ ವಿಜಯ ಸಾಧಿಸಿರುವುದಾಗಿ ಅಧ್ಯಕ್ಷ ಮಹೀಂದ ರಾಜಪಕ್ಸೆ ಭಾನುವಾರ ಘೋಷಿಸಿದ್ದಾರೆ.ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಮಿಲಿಟರಿ ಸಾರಿರುವ ಸಮರದಲ್ಲಿ ವಾಯುವ್ಯ ಭಾಗದಲ್ಲಿ ಭಾನುವಾರವೂ ಕೂಡ ಸುಮಾರು 70ಮಂದಿ ತಮಿಳು ಬಂಡುಕೋರರು ಸಾವನ್ನಪ್ಪಿರುವುದಾಗಿ ಹೇಳಿದೆ.ಎಲ್‌ಟಿಟಿಇ ಬಂಡುಕೋರರ ಕರಾವಳಿ ಭಾಗದಲ್ಲಿ ಹಿಡಿತದಲ್ಲಿಟ್ಟುಕೊಂಡಿದ್ದ ಕೊನೆಯ ಪ್ರದೇಶವನ್ನು ಲಂಕಾ ಸರ್ಕಾರದ ಪಡೆ ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಬಂಡುಕೋರರನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿರುವುದಾಗಿ ರಾಜಪಕ್ಸೆ ತಿಳಿಸಿದರು.ಯುದ್ಧದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ತಮಿಳು ನಾಗರಿಕರನ್ನು ಸುರಕ್ಷಿತತೆಯ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದು ಲಂಕಾ ಮಿಲಿಟರಿ ಪಡೆ ವಿವರಿಸಿದೆ. ನಮ್ಮ ಸರ್ಕಾರದ ಅಂತಿಮ ಗುರಿ ಎಲ್‌ಟಿಟಿಇ ವಿರುದ್ಧ ಜಯಸಾಧಿಸುವುದೇ ಆಗಿತ್ತು ವಿನಃ ತಮಿಳು ನಾಗರಿಕರ ವಿರುವದ್ಧಲ್ಲ ಎಂದು ಸ್ಪಷ್ಟಪಡಿಸಿರುವ ರಾಜಪಕ್ಸೆ, ಆ ನಿಟ್ಟಿನಲ್ಲಿ ಸರ್ಕಾರ ಎಲ್‌ಟಿಟಿಇ ಕೊನೆಗೂ ವಿಜಯ ಸಾಧಿಸಿದೆ ಎಂದು ಹೇಳಿದರು.ಪ್ರಭಾಕರನ್ ಆತ್ಮಹತ್ಯೆಗೆ ಶರಣು?: ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಶ್ರೀಲಂಕಾ ಮಿಲಿಟರಿ ದಾಳಿಯನ್ನು ತಪ್ಪಿಸಿಕೊಳ್ಳಲಾಗದೇ ಸಯನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಲಂಕಾ ಮಿಲಿಟರಿ ಶಂಕಿಸಿದೆ. ಆದರೆ ಪ್ರಭಾಕರನ್ ಈವರೆಗೂ ಎಲ್ಲಿದ್ದಾನೆ, ಬದುಕಿದ್ದಾನೆಯೇ ಅಥವಾ ಸಾವನ್ನಪ್ಪಿರಬಹುದೇ ಎಂಬುದೇ ನಿಗೂಢವಾಗಿದೆ. ಆದರೆ ಕೆಲವು ಮಾಧ್ಯಮಗಳ ವರದಿಯಂತೆ, ಶನಿವಾರ ರಾತ್ರಿ ಸುಮಾರು 300ಮಂದಿ ಎಲ್ಟಿಟಿಟಿಇ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿಸಿದೆ. |