ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದೌಲತ್ತಿನ ಆಡಳಿತ ನೀಡಿ ಉಗ್ರಗಾಮಿಗಳ ಅಟ್ಟಹಾಸ ಹೆಚ್ಚುವಂತೆ ಮಾಡಿದ್ದಾರೆಂಬ ಅಮೆರಿಕದ ಆರೋಪಕ್ಕೆ ಕಿಡಿಕಾರಿರುವ ಮಾಜಿ ಅಧ್ಯಕ್ಷ ಮುಷರ್ರಫ್, ತಾನು ಯಾರ ಚಮ್ಚಾ(ಕೈಗೊಂಬೆ) ಅಲ್ಲ ಎಂದು ಹೇಳಿದ್ದಾರೆ.
ನಾನು ಯಾರೊಬ್ಬರ ಚಮ್ಚಾ (ಕೈಗೊಂಬೆ) ಅಲ್ಲ ಅಥವಾ ಯಾರ ಹಿತವಚನವೂ ನನಗೆ ಬೇಕಾಗಿಲ್ಲ ಎಂದು ಮುಷರ್ರಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಆಡಳಿತಾವಧಿಯಲ್ಲಿಯೇ ಮೂಲಭೂತವಾದಿಗಳು ಪಾಕಿಸ್ತಾನದಲ್ಲಿ ಗಟ್ಟಿಯಾಗಿ ತಳವೂರುವಂತಾಗಿದೆ ಎಂಬ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದರು. ಸುಮಾರು 30ವರ್ಷಗಳ ಹಿಂದೆ ಅಂದರೆ 1979ರಲ್ಲಿ ಅಂದಿನ ಸೋವಿಯತ್ ರಷ್ಯಾ ಅಫ್ಘಾನ್ ಗಡಿಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. 2001ರಲ್ಲಿ ಅಮೆರಿಕ ಕೂಡ ದಾಳಿ ನಡೆಸಿತ್ತು. ತದನಂತರ ಅಲ್ ಖಾಯಿದಾ ಹಾಗೂ ತಾಲಿಬಾನ್ ಉಗ್ರರು ಪಾಕ್ ಬುಡಕಟ್ಟು ಪ್ರದೇಶದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಹೇಳಿದರು.
ತನ್ನ ಆಡಳಿತಾವಧಿ ಕಾಲಕ್ಕಿಂತ ಮೊದಲೇ ಉಗ್ರರು ಠಿಕಾಣಿ ಹೂಡಿದ್ದರು, ಇದೀಗ ಸ್ವಾತ್ ಕಣಿವೆ ಪ್ರದೇಶದಲ್ಲಿ ಉಗ್ರರ ವಿರುದ್ಧ ಪಾಕ್ ಮಿಲಿಟರಿ ಹೋರಾಟ ನಡೆಸುತ್ತಿದ್ದು, ಅವರನ್ನು ಬಗ್ಗು ಬಡಿಯುತ್ತಾರೆ ಎಂದು ಮುಷ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. |