ಶ್ರೀಲಂಕಾ ಸೇನೆಯ ವಿರುದ್ಧ ಮೂರು ದಶಕಗಳ ಕಾಲ ಪ್ರತ್ಯೇಕತೆಯ ಹೋರಾಟ ನಡೆಸಿದ ಎಲ್‌ಟಿಟಿಇ ಬಂದೂಕುಗಳ ಸದ್ದು ಅಡಗಿದೆ. ಯುದ್ಧವಲಯದಲ್ಲಿ ಉಳಿದ ನಾಗರಿಕರ ರಕ್ಷಣೆಗಾಗಿ ತನ್ನ ಬಂದೂಕುಗಳನ್ನು ಸದ್ದನ್ನು ನಿಲ್ಲಿಸಿದ್ದಾಗಿ ಎಲ್‌ಟಿಟಿಇ ತಿಳಿಸಿದ್ದು, ಶಾಂತಿಪ್ರಕ್ರಿಯೆಗೆ ಪ್ರವೇಶಿಸುವ ತನ್ನ ಇಚ್ಛೆಯನ್ನು ಪ್ರಕಟಿಸಿದೆ. ಏತನ್ಮಧ್ಯೆ, ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ ದೇಹವನ್ನು ಸೇನಾಪಡೆಗಳು ಪತ್ತೆಹಚ್ಚಿರುವುದಾಗಿ ಮಿಲಿಟರಿ ವಕ್ತಾರ ಉದಯ ನಾನಯಕ್ಕರಾ ತಿಳಿಸಿದ್ದಾರೆ.
ಪ್ರಭಾಕರನ್‌ಗೆ ಮೂವರು ಮಕ್ಕಳಿದ್ದು, ಸಮರದಲ್ಲಿ ಮೃತಪಟ್ಟ ಬಂಡುಕೋರ ನಾಯಕನ ಹೆಸರನ್ನು ಪ್ರಭಾಕರನ್ ಪುತ್ರನಿಗೆ ಇಡಲಾಗಿತ್ತು. ತನ್ನ ತಂದೆಯ ಜತೆ ಸೇನೆಯ ವಿರುದ್ಧ ಕಾಳಗ ನಡೆಸುತ್ತಿದ್ದ ಏಕಮಾತ್ರ ಪುತ್ರ ಆಂಥೋನಿಯೆಂದು ಹೇಳಲಾಗಿದೆ.
ಬಂಡುಕೋರರಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಪತ್ರಕರ್ತರಿಗೆ ಮತ್ತು ವೀಕ್ಷಕರಿಗೆ ಯುದ್ಧವಲಯದಲ್ಲಿ ಪ್ರವೇಶ ನಿಷೇಧದಿಂದ ಮಿಲಿಟರಿ ಹೇಳಿಕೆಯನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ.
ಎಲ್‌ಟಿಟಿಇ ರಾಜಕೀಯ ವಿಭಾಗದ ಮುಖ್ಯಸ್ಥ ಮತ್ತು ಇಬ್ಬರು ಉನ್ನತ ನಾಯಕರನ್ನು ಕೂಡ ವಿಶೇಷ ಪಡೆಗಳು ಹತ್ಯೆ ಮಾಡಿರುವುದಾಗಿ ಶ್ರೀಲಂಕಾ ಮಿಲಿಟರಿ ತಿಳಿಸಿದೆ. ಆದರೆ ಎಲ್ಟಿಟಿಇ ವರಿಷ್ಠ ಪ್ರಭಾಕರನ್ ಸುಳಿವಿನ ಬಗ್ಗೆ ಯಾವ ಮಾಹಿತಿಯನ್ನೂ ಸೇನೆ ನೀಡಿಲ್ಲ.
ಭಾನುವಾರ ರಾತ್ರಿ ನಡೆದ ದಾಎಳಿಯಲ್ಲಿ ಬಂಡುಕೋರರ ರಾಜಕೀಯ ವಿಭಾಗದ ನಾಯಕ ಬಾಲಸಿಂಗಂ ನಾದೇಶನ್, ಶಾಂತಿ ಕಾರ್ಯಾಲಯದ ಮುಖ್ಯಸ್ಥ ಶಿವರತ್ನಂ ಪುಲೀದೇವನ್ ಮತ್ತು ಉನ್ನತಮಿಲಿಟರಿನಾಯಕ ರಮೇಶ್ ಕಾಳಗದಲ್ಲಿ ಮೃತಪಟ್ಟಿದ್ದಾರೆಂದು ಮಿಲಿಟರಿ ಉನ್ನತಾಧಿಕಾರಿ ತಿಳಿಸಿದ್ದಾರೆ. ಈ ವರದಿಗಳನ್ನು ಪರಿಶೀಲನೆ ಮಾಡುತ್ತಿರುವುದಾಗಿ ಮಿಲಿಟರಿ ವಕ್ತಾರ ಉದಯ ನಾನಯಕ್ಕರಾ ತಿಳಿಸಿದರು. |