ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಶ್ರೀಲಂಕಾ ಸೇನೆಯ ಭದ್ರಕೋಟೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆಂದು ಶ್ರೀಲಂಕಾ ಸೇನೆ ಸೋಮವಾರ ತಿಳಿಸಿದೆ.
ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ ಶವ ಕೂಡ ಪತ್ತೆಯಾಗಿರುವುದಾಗಿ ಶ್ರೀಲಂಕಾ ಸೇನೆ ತಿಳಿಸಿದೆ. ಪ್ರಭಾಕರನ್ ದಾರುಣ ಸಾವಿನಿಂದ ಶ್ರೀಲಂಕಾದಲ್ಲಿ ದಶಕಗಳ ಕಾಲದ ಪ್ರತ್ಯೇಕತೆಯ ಹೋರಾಟಕ್ಕೆ ತೆರೆಬಿದ್ದಿದ್ದು, ಎಲ್‌ಟಿಟಿಇ ಸಂಪೂರ್ಣ ನಾಮಾವಶೇಷಗೊಂಡಿದೆ. ತಮಿಳು ಬಂಡುಕೋರರ ವರಿಷ್ಠ ವೇಲುಪಿಳ್ಲೈ ಪ್ರಭಾಕರನ್ ಜೀವಂತವಾಗಿದ್ದು, ಸರ್ಕಾರಿ ಪಡೆಗಳು ಅವರನ್ನು ಸುತ್ತುವರಿದಿರುವುದಾಗಿ ಶ್ರೀಲಂಕಾದ ಮಿಲಿಟರಿ ಈ ಮುಂಚೆ ತಿಳಿಸಿತ್ತು.
ಪ್ರಭಾಕರನ್‌ನಿಗೆ ಸುಮಾರು 200 ಬಂಡುಕೋರರು ಸರ್ಪಕಾವಲನ್ನು ನೀಡಿದ್ದು, ಅರಣ್ಯದ ಸಣ್ಣ ಭಾಗವೊಂದರಲ್ಲಿ ಶ್ರೀಲಂಕಾ ಪಡೆಗಳು ಬಂಡುಕೋರರನ್ನು ಸುತ್ತುವರಿದಿದೆ ಎಂದು ಮಿಲಿಟರಿ ವಕ್ತಾರ ಟೆಲಿವಿಷನ್‌ನಲ್ಲಿ ತಿಳಿಸಿದ್ದವು. ಕಳೆದ ಕೆಲವು ವಾರಗಳಲ್ಲಿ ಶ್ರೀಲಂಕಾ ಸೇನೆ ಎಲ್‌ಟಿಟಿಇಯನ್ನು ನಾಮಾವಶೇಷ ಮಾಡಿದ್ದು, ಅವೆರಡರ ನಡುವೆ ಸಮರ ಮುಕ್ತಾಯ ಘಟ್ಟವನ್ನು ತಲುಪಿರುವುದಾಗಿ ಮತ್ತು ನಾಲ್ಕು ಬಂಡುಕೋರ ನಾಯಕರು ಹತರಾಗಿದ್ದಾಗಿ ಸೇನೆ ತಿಳಿಸಿದೆ.
ಬಂಡುಕೋರರ ರಾಜಕೀಯ ವಿಭಾಗದ ಮುಖ್ಯಸ್ಥ ಬಾಲಸಿಂಗಂ ನಾದೇಸನ್, ಬಂಡುಕೋರರ ಶಾಂತಿ ಕಾರ್ಯಾಲಯದ ಮುಖಂಡ ಶಿವರತ್ನಂ ಪುಲೀದೇವನ್ ಮತ್ತು ಮಿಲಿಟರಿ ವಿಭಾಗದ ನಾಯಕ ರಮೇಶ್ ಹತರಾಗಿದ್ದಾರೆಂದು ಸೇನೆ ಹೇಳಿದೆ. ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ ಅವರ ದೇಹ ಕೂಡ ಪತ್ತೆಯಾಗಿರುವುದಾಗಿ ಸೇನೆ ತಿಳಿಸಿದೆ. ವರದಿಗಾರರಿಗೆ ಕದನವಲಯಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಈ ವರದಿಗಳನ್ನು ದೃಢಪಡಿಸಲು ಸಾಧ್ಯವಾಗಿಲ್ಲ. |