ಗುಂಡು ಹಾರಾಟ ನಿಷೇಧ ಪ್ರದೇಶದ ಬಳಿಯ ಮುಲ್ಲೈವೈಕ್ಕಾಲ್‌ನಲ್ಲಿ ಮೂರು ಕೋಣೆಗಳಿಂದ ಕೂಡಿದ ಮನೆಯೊಂದರಲ್ಲಿ ಭಾರೀ ಭದ್ರತೆಯ ಚಿತ್ರಹಿಂಸೆ ಕೋಣೆ ಮತ್ತು ಬಂಧೀಖಾನೆ ಸಂಕೀರ್ಣವನ್ನು ಎಲ್‌ಟಿಟಿಇ ನಡೆಸುತ್ತಿದ್ದುದನ್ನು ಶ್ರೀಲಂಕಾ ಸೇನೆ ಪತ್ತೆಹಚ್ಚಿದೆ.
ವೆಲ್ಲಮುಲ್ಲವೈಕ್ಕಾಲ್ ಉಪ ಅಂಚೆ ಕಚೇರಿಯಲ್ಲಿ ಈ ಸಂಕೀರ್ಣವನ್ನು ಪತ್ತೆಹಚ್ಚಲಾಗಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ. ವಿಸ್ತಾರ ವಿಶ್ರಾಂತ ಕೋಣೆ ಮತ್ತು ಮೂರು ವಿಶಾಲವಾದ ಕೋಣೆಗಳಿಗೆ ಪ್ರಭಾಕರನ್ ಆದೇಶದ ಮೇಲೆ ಸಮೀಪದ ಬಂಕರ್‌ಗಳಿಂದ ರಕ್ಷಣೆ ನೀಡಲಾಗಿತ್ತೆಂದು ಸಚಿವಾಲಯ ತಿಳಿಸಿದೆ.
ಎಲ್‌ಟಿಟಿಇ ವಿರೋಧಿ ಮಹಿಳೆಯರು ಮತ್ತು ಪುರುಷರನ್ನು ಇಲ್ಲಿ ಸೆರೆಯಲ್ಲಿಟ್ಟು ಅವರನ್ನು ಆನೆಗಳಿಗೆ ಕಟ್ಟುವ ಸರಪಳಿಯಿಂದ ಬಿಗಿಯಲಾಗಿತ್ತೆಂಬ ವಿಷಯವನ್ನು ಸಚಿವಖಾತೆ ಬಹಿರಂಗಮಾಡಿದೆ. ವಿರೋಧಿಗಳನ್ನು ಸೆರೆಯಿಟ್ಟಿದ್ದ ಲೋಹದ ಬಂಧೀಖಾನೆ ಬೋನುಗಳು 10-12 ಅಡಿ ಎತ್ತರದಲ್ಲಿದ್ದು ಬೀಗದಿಂದ ಜಡಿಯಲಾಗಿತ್ತು ಮತ್ತು ಕೋಣೆಯ ಇನ್ನೊಂದು ಭಾಗವನ್ನು ಥಳಿತಕ್ಕೆ ಮತ್ತು ಚಿತ್ರಹಿಂಸೆಗೆ ಬಳಸಲಾಗುತ್ತಿತ್ತೆಂದು ಸಚಿವಾಲಯ ಹೇಳಿದೆ.
ಶತ್ರುಗಳಿಗೆ ಶಿಕ್ಷೆ ನೀಡುವುದನ್ನು ಪ್ರಭಾಕರನ್ ಪ್ರತ್ಯಕ್ಷದರ್ಶಿಯಾಗಿ ವೀಕ್ಷಿಸುತ್ತಿದ್ದನೆಂದು ಖಚಿತವಲ್ಲದ ವರದಿಗಳು ಹೇಳಿದ್ದು, ಚಿತ್ರಹಿಂಸೆ ಕೋಣೆಯ ಗೋಡೆಗಳು ರಕ್ತದ ಕಲೆಗಳಿಂದ ಮತ್ತು ತಲೆಕೂದಲುಗಳ ಚೂರುಗಳು ಬಿದ್ದಿರುವುದಾಗಿ ಅದು ತಿಳಿಸಿದೆ. |