ಭಾರತದಿಂದ ಬೆದರಿಕೆ ಪರಿಕಲ್ಪನೆ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಗಡಿಯಲ್ಲಿ ಸೇನೆಯನ್ನು ಸಜ್ಜಾಗಿಟ್ಟಿದೆಯೇ ಹೊರತು ತಾಲಿಬಾನ್ ಉಗ್ರಗಾಮಿಗಳ ಬೆದರಿಕೆಗೆ ಹೆಚ್ಚು ಗಮನ ನೀಡದಿರುವ ಕಾರಣದಿಂದಲ್ಲ ಎಂದು ಮಾಜಿ ಅಧ್ಯಕ್ಷ ಮುಷರಫ್ ತಿಳಿಸಿದ್ದಾರೆ.
ಖಾಸಗಿ ಸುದ್ದಿಚಾನೆಲ್‌ಗೆ ಭಾನುವಾರ ಸಂದರ್ಶನ ನೀಡಿದ ಅವರು, ತಾಲಿಬಾನ್ ಇಸ್ಲಾಮಾಬಾದ್‌ನಿಂದ ಕೇವಲ 96 ಕಿಮೀ ದೂರದಲ್ಲಿದ್ದು, ಪಂಜಾಬ್ ಪ್ರಾಂತ್ಯದ ಕೈವಶಕ್ಕೆ ಯತ್ನಿಸುತ್ತಿರುವಾಗ, ಭಾರತದ ಕಡೆಯಿಂದ ಬೆದರಿಕೆ ಬಗ್ಗೆ ಪಾಕಿಸ್ತಾನ ಅತೀಹೆಚ್ಚಾಗಿ ಗಮನಹರಿಸಿದೆ ಎಂಬ ವಾದವನ್ನು ಅವರು ಅಲ್ಲಗಳೆದರು. ಭಾರತ ಪಾಕಿಸ್ತಾನದ ಗಡಿಗಳಲ್ಲಿ ತನ್ನ ಸೇನಾತುಕಡಿಗಳನ್ನು ನಿಯೋಜಿಸಿದ್ದರಿಂದ ಪಾಕಿಸ್ತಾನ ಕೂಡ ಮುನ್ನೆಚ್ಚರಿಕೆ ವಹಿಸಿರುವುದಾಗಿ ಅವರು ಹೇಳಿದರು.
ಮುಂಬೈ ಭಯೋತ್ಪಾದನೆ ದಾಳಿಗಳ ಬಳಿಕ ಹಾಗೂ ಸಂಸತ್ತಿನ ಮೇಲೆ ದಾಳಿ ಬಳಿಕ ಭಾರತ ಗಡಿಯಲ್ಲಿ ಸೇನೆಯಲ್ಲಿ ಜಮಾಯಿಸಿತು ಎಂದು ಮುಷರಫ್ ಹೇಳಿದರು. ಆದ್ದರಿಂದ ನಮ್ಮ ಸೇನೆಯು ಗಡಿಯಲ್ಲಿ ಜಮಾವಣೆಗೊಂಡಿತು. ಸುಮಾರು 10 ತಿಂಗಳು ಸೇನೆ ಅಲ್ಲಿತ್ತೆಂದು ಅವರು ನುಡಿದರು. ನಮ್ಮ ಮೇಲೆ ದಾಳಿ ಮಾಡಿದರೆ ನಾವು ಕೂಡ ದಾಳಿ ಮಾಡುವುದಾಗಿ ಮತ್ತು ಪಾಕಿಸ್ತಾನವನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಸಿದ್ದಾಗಿ ಮುಷರಫ್ ಹೇಳಿದರು.
ತಾಲಿಬಾನ್ ಜತೆ ಪಾಕಿಸ್ತಾನದ ಭದ್ರತೆ ಕುರಿತು ರಾಜಿಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ ಮುಷರಫ್, 'ತಾಲಿಬಾನ್ ಅಷ್ಟೊಂದು ಬಲಿಷ್ಠರಾಗಿಲ್ಲ. ತಾಲಿಬಾನಿಗಳಿಗೆ ರಾಜಧಾನಿಗೆ ಸಮೀಪಿಸುವಷ್ಟು ಧೈರ್ಯವಿಲ್ಲ. ಒಂದು ವೇಳೆ ಸಮೀಪಿಸಿದರೆ ಯಾವುದೇ ಸಮಯದಲ್ಲಿ ಯಾವುದೇ ಬಲಪ್ರಯೋಗದಿಂದ ಅವರನ್ನು ತಡೆಯಲಾಗುವುದು' ಎಂದು ಮುಷರಫ್ ಹೇಳಿದರು. |