ತಮಿಳು ಬಂಡುಕೋರರು ಮತ್ತು ಶ್ರೀಲಂಕಾ ಸರ್ಕಾರದ ಯುದ್ಧಾಪರಾಧಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರು ಕರೆನೀಡುವರೆಂದು ನಿರೀಕ್ಷಿಸಲಾಗಿದೆ.
ಯುದ್ಧಾಪರಾಧಗಳ ಬಗ್ಗೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ತುರ್ತು ಸಮಾವೇಶ ಕರೆಯಬೇಕೆಂದೂ ಬ್ರಸೆಲ್ಸ್‌ನಲ್ಲಿ ನಡೆಯುವ ಸಭೆಯಲ್ಲಿ ಅವರು ಒತ್ತಾಯಿಸಲಿದ್ದಾರೆ. ನಾಗರಿಕರ ಸಾವುನೋವಿನ ಸಂಖ್ಯೆ ಹೆಚ್ಚುತ್ತಿರುವ ವರದಿಗಳಿಂದ ಐರೋಪ್ಯ ಒಕ್ಕೂಟ ಗಾಬರಿಯಾಗಿದ್ದಾಗಿ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ. ಶ್ರೀಲಂಕಾ ಸರ್ಕಾರ ಭಾರೀ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಯುದ್ಧಕ್ಕೆ ಬಳಸಿದ ಬಗ್ಗೆ ಕೂಡ ಅದು ಕಳವಳಪಟ್ಟಿದೆ.
ಶ್ರೀಲಂಕಾದ ಆಂತರಿಕ ಯುದ್ಧಕ್ಕೆ ತೆರೆಬಿದ್ದಿದ್ದರೂ, ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ಸಾವಿರಾರು ನಾಗರಿಕರ ಗತಿ ಏನಾಯಿತೆಂಬುದು ಅಸ್ಪಷ್ಟವಾಗಿ ಉಳಿದಿದೆ. ತಮಿಳು ಬಂಡುಕೋರರಲ್ಲದೇ ಸರ್ಕಾರ ಕೂಡ ಎಸಗಿದ ಹೇಯ ಯುದ್ಧಾಪರಾಧಗಳ ಸ್ವತಂತ್ರ ತನಿಖೆಗೆ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರು ಕರೆ ನೀಡಲಿದ್ದಾರೆ.
ಶುಕ್ರವಾರ ಬಿಡುಗಡೆ ಮಾಡಲಾದ ಜಂಟಿ ಪತ್ರದಲ್ಲಿ, ಫ್ರೆಂಚ್ ವಿದೇಶಾಂಗ ಸಚಿವ ಬರ್ನಾರ್ಡ್ ಕೋಚ್‌ನರ್ ಮತ್ತು ಬ್ರಿಟನ್ ಸಹವರ್ತಿ ಡೇವಿಡ್ ಮಿಲಿಬ್ಯಾಂಡ್ ಅವರು, ಶ್ರೀಲಂಕಾ ಅಧ್ಯಕ್ಷ ಮಹಿಂದ್ರ ರಾಜಪಕ್ಷೆಗೆ ಕರೆ ಮಾಡಿ ಭಾರೀ ಫಿರಂಗಿಗಳನ್ನು ಬಳಕೆ ತಪ್ಪಿಸುವಂತೆ ಮತ್ತು ಸೇನೆಯು ತನ್ನ ಬದ್ಧತೆಗೆ ಅನುಗುಣವಾಗಿ ವರ್ತಿಸಿಲ್ಲವೆಂದು ಹೇಳಿದ್ದಾರೆ. |