ದಶಕಗಳ ಕಾಲ ಶ್ರೀಲಂಕಾಸೇನೆಯನ್ನು ಬೆಚ್ಚಿಬೀಳಿಸಿದ, ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋರಯುದ್ಧವನ್ನು ಹೂಡಿದ ತಮಿಳು ವ್ಯಾಘ್ರಗಳ ನಾಯಕ ವೇಲುಪಿಳ್ಳೈ ಪ್ರಭಾಕರನ್ ಮುನ್ನುಗ್ಗುತ್ತಿದ್ದ ಶ್ರೀಲಂಕಾ ಸೇನಾಪಡೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೇನೆಯ ಗುಂಡುಗಳ ದಾಳಿಗೆ ಬಲಿಯಾದನೆಂದು ಶ್ರೀಲಂಕಾ ಮಿಲಿಟರಿ ಸೋಮವಾರ ಘೋಷಿಸಿದೆ. ಪ್ರಭಾಕರನ್ ತನ್ನ ನಿಕಟಸಹಚರರ ಜತೆ ಬೆಂಗಾವಲಿಗಿದ್ದ ವ್ಯಾನ್ ಮತ್ತು ಆಂಬ್ಯುಲೆನ್ಸ್‌ನಲ್ಲಿ ಯುದ್ಧವಲಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ. ಶ್ರೀಲಂಕಾ ಸೇನೆ ಅವನಿದ್ದ ವಾಹನದ ಮೇಲೆ ದಾಳಿ ನಡೆಸಿತು. ವಾಹನದಲ್ಲಿದ್ದ ಇನ್ನಿಬ್ಬರ ಜತೆ ಪ್ರಭಾಕರನ್ ಕೂಡ ಹತನಾಗಿದ್ದಾನೆ. ಈ ಕುರಿತು ಔಪಚಾರಿಕ ಪ್ರಕಟಣೆಯನ್ನು ನೀಡುವುದಾಗಿ ಹೆಸರು ಹೇಳಲು ಬಯಸದ ಅಧಿಕಾರಿ ತಿಳಿಸಿದ್ದಾರೆ. ಮೃತದೇಹಗಳ ಡಿಎನ್‌ಎ ಪರೀಕ್ಷೆ ನಡೆಸುವ ತನಕ ಪ್ರಭಾಕರನ್ ಸತ್ತಿದ್ದಾನೆಂಬ ಅಧಿಕೃತ ಪ್ರಕಟಣೆ ನೀಡುವುದನ್ನು ಸೇನೆ ತಡೆಹಿಡಿದಿದೆ. ವ್ಯಾಘ್ರ ಮುಖಂಡ ಇನ್ನಿಬ್ಬರು ಸಹಚರರ ಜತೆ ಮೃತಪಟ್ಟಿದ್ದು, ಅವರಿಬ್ಬರನ್ನು ಗುರುತಿಸಲಾಗಿಲ್ಲ. ಮೃತರಲ್ಲಿ ಅವನ ನಿಕಟ ಸಂಗಡಿಗರಾದ ಎಲ್‌ಟಿಟಿಇ ಗುಪ್ತಚರ ಮುಖಂಡ ಪೋಟ್ಟು ಅಮ್ಮನ್ ಮತ್ತು ಸೀ ಟೈಗರ್ಸ್ ಮುಖಂಡ ಸೂಸೈ ಇರಬಹುದೆಂದು ಅಂದಾಜು ಮಾಡಲಾಗಿದೆ. ಪ್ರಭಾಕರನ್ ನಿಧನದಿಂದ ಬಂಡುಕೋರರ ನಾಯಕತ್ವ ನುಚ್ಚುನೂರಾಗಿದ್ದು, ಪ್ರತ್ಯೇಕ ಜನಾಂಗೀಯ ತಾಯ್ನಾಡು ರೂಪಿಸುವ ದಶಕಗಳ ಕಾಲದ ಅವರ ಹೋರಾಟ ಕೊನೆಗೊಂಡಿದೆ. ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಥೋನಿ, ಸಂಘಟನೆಯ ರಾಜಕೀಯ ವಿಭಾಗದ ನಾಯಕ ನಾದೇಶನ್, ಮತ್ತು ಎಲ್‌ಟಿಟಿಇ ಮುಖ್ಯಸ್ಥ ಶಾಂತಿ ಕಾರ್ಯದರ್ಶಿ ಪುಲಿದೇವನ್ ಶವಗಳು ಸಹ ಪತ್ತೆಯಾಗಿರುವುದಾಗಿ ಸೇನೆ ಹೇಳಿದೆ. ಮೃತದೇಹಗಳ ಪೈಕಿ ಎಲ್‌ಟಿಟಿಇ ಪೊಲೀಸ್ ಮುಖ್ಯಸ್ಥ ಲಾಂಗೊ, ಮಿಲಿಟರಿ ನಾಯಕ ರಮೇಶ್ ಮತ್ತು ಗುಪ್ತಚರ ಮುಖಂಡ ಕಪಿಲ್ ಅಮ್ಮಾನ್ ಕೂಡ ಸೇರಿದ್ದಾರೆ.ಭಾನುವಾರ ಗೆರಿಲ್ಲಾಗಳು ತಮ್ಮ ದಶಕಗಳ ಕಾಲದ ಹೋರಾಟ ಕಹಿಅಂತ್ಯ ಕಂಡಿದೆಯೆಂದು ಪ್ರಕಟಿಸಿ, ಏಷ್ಯಾದ ಸುದೀರ್ಘ ಆಂತರಿಕ ಯುದ್ಧ ಬಹುತೇಕ ಮುಕ್ತಾಯವಾಗಿದ್ದಾಗಿ ಹೇಳಿದ್ದರು. ಹಿಂದೊಮ್ಮೆ ವಿಶ್ವದ ಅತ್ಯಂತ ಭಯಾನಕ ಗೆರಿಲ್ಲಾ ಸೇನೆಯಾಗಿದ್ದ ಎಲ್‌ಟಿಟಿಇ ಎರಡು ವರ್ಷಗಳ ಹಿಂದೆ ಕಾರ್ಯಾಚರಣೆಗೆ ಇಳಿಯಲು ಮುಂಚಿತವಾಗಿ ಪ್ರತ್ಯೇಕ ಮಿನಿ ರಾಜ್ಯದ ಸ್ವಯಂಘೋಷಿತ ಅಧಿಪತಿಯಾಗಿತ್ತು. ದ್ವೀಪದ ಮೂರನೇ ಒಂದು ಭಾಗವನ್ನು ಎಲ್‌ಟಿಟಿಇ ಆಧಿಪತ್ಯ ಆಕ್ರಮಿಸಿಕೊಂಡಿತ್ತು. 'ನಾವೀಗ ನಮ್ಮ ಬಂದೂಕುಗಳ ಸದ್ದನ್ನು ಅಡಗಿಸಲು ನಿರ್ದರಿಸಿದ್ದೇವೆ. ಈ ಯುದ್ಧದಲ್ಲಿ ಅನೇಕ ಮಂದಿ ನಾಗರಿಕರ ಸಾವುನೋವಿಗೆ ವಿಷಾದಿಸುತ್ತೇವೆಂದು ಅಂತಾರಾಷ್ಟ್ರೀಯ ಸಂಬಂಧಗಳ ವ್ಯಾಘ್ರಗಲ ನಾಯಕ ಸೆಲ್ವರಸ ಪದ್ಮನಾದನ್ ಹೇಳಿದ್ದನು. ಆದರೆ ಶಾಂತಿ ಮಾತುಕತೆ ಪ್ರಸ್ತಾಪಕ್ಕೆ ಶ್ರೀಲಂಕಾ ಖಡಾಖಂಡಿತ ನಿರಾಕರಿಸಿ, ಶರಣಾಗಲು ನಿರಾಕರಿಸುವ ಬಂಡುಕೋರರನ್ನು ನುಚ್ಚುನೂರು ಮಾಡಿ ಪ್ರತಿ ಅಂಗುಲ ನೆಲವನ್ನು ಕೈವಶ ಮಾಡುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿತ್ತು. ಶ್ರೀಲಂಕಾದ ಅಧ್ಯಕ್ಷ ಮಹೀಂದ್ರರಾಜಪಕ್ಷೆ ಸಂಸತ್ತಿನ ಹೊಸ ಅಧಿವೇಶನ ಕರೆದು ಯುದ್ಧದ ಅಂತ್ಯಕ್ಕೆ ಅಧಿಕೃತ ಮುದ್ರೆ ಒತ್ತಲಿದ್ದಾರೆಂದು ಹೇಳಲಾಗಿದೆ. |