ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ಅಂತ್ಯಗೊಳಿಸಿ ಶಾಂತಿ ಸ್ಥಾಪಿಸುವುದಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಸೋಮವಾರ ತಿಳಿಸಿದ್ದಾರೆ.
ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಹೋರಾಟದಿಂದ ನಿರಾಶ್ರಿತರಾದ ಒಂದು ಮಿಲಿಯ ಜನರ ನೆರವಿಗೆ ಎಲ್ಲ ಪ್ರಯತ್ನ ಮಾಡುವುದಾಗಿ ಗಿಲಾನಿ ತಿಳಿಸಿದರು. ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದ್ದು, ಶಾಂತಿನಾಶಕ್ಕೆ ಯತ್ನಿಸಿದ ಜನರು ವೇಷಮರೆಸಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆಂದು ಗಿಲಾನಿ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದರು.
ಅಣ್ವಸ್ತ್ರ ಸಜ್ಜಿತ ಪಾಕಿಸ್ತಾನದಲ್ಲಿ ಕಳೆದ ಎರಡು ವರ್ಷಗಳಿಂದ ಉಗ್ರರ ಹಿಂಸಾಚಾರ ಮೇರೆಮೀರಿದ್ದು, ಪಾಕ್ ಸ್ಥಿರತೆಗೆ ಬೆದರಿಕೆಯೊಡ್ಡಿದೆ. ಅಲ್ ಖಾಯಿದಾ ಸೋಲಿಸಲು ಪಾಕಿಸ್ತಾನದ ನೆರವು ಯಾಚಿಸಿದ್ದ ಅಮೆರಿಕ ಕೂಡ ಈ ಕುರಿತು ಕಳವಳಪಟ್ಟಿದೆ. ತಾಲಿಬಾನ್ ಸ್ವಾತ್ ಭದ್ರಕೋಟೆಯಲ್ಲಿ ಇದುವರೆಗೆ 1000ಕ್ಕೂ ಮಿಕ್ಕಿ ಉಗ್ರಗಾಮಿಗಳು ಸತ್ತಿದ್ದಾರೆಂದು ಮತ್ತು ಸೇನೆಯ 50 ಯೋಧರು ಹತರಾಗಿದ್ದಾರೆಂದು ಮಿಲಿಟರಿ ಹೇಳಿದೆ.ಹಿಂದೊಮ್ಮೆ ಪ್ರವಾಸಿಗಳ ಕಾಣವಾಗಿದ್ದ ಸ್ವಾತ್ ಕಣಿವೆ ಈಗ ಅಗ್ನಿಕುಂಡವಾಗಿದೆ. ಸೇನೆಯ ಕಾರ್ಯಾಚರಣೆಯಿಂದ 1.17 ಮಿಲಿಯ ಜನರು ನಿರಾಶ್ರಿತರಾಗಿದ್ದು, ಮಾನವೀಯ ಬಿಕ್ಕಟ್ಟಿಗೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಗಾಗಿ ವಿಶ್ವಸಂಸ್ಥೆ ಕರೆನೀಡಿದೆ.
ನಾವು ಸಂತ್ರಸ್ತ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮತ್ತು ರಕ್ಷಣೆ ನೀಡುವಲ್ಲಿ ಸಂಪೂರ್ಣ ಶ್ರಮಿಸುವುದಾಗಿ ಗಿಲಾನಿ ಹೇಳಿದ್ದಾರೆ.ಭಯೋತ್ಪಾದನೆ ವಿರುದ್ಧ ಹೋರಾಟವು ನಮ್ಮ ಮುಂದಿನ ಪೀಳಿಗೆಯ ಭದ್ರತೆ ಮತ್ತು ರಕ್ಷಣೆಗೆ ಖಾತರಿ ನೀಡುತ್ತದೆಂದು ಅವರು ಹೇಳಿದ್ದಾರೆ.
ಇಸ್ಲಾಮಿಕ್ ಉಗ್ರರ ವಿರುದ್ಧ ಹೋರಾಟದಲ್ಲಿ ಅಮೆರಿಕ ಜತೆ ಪಾಕ್ ಮೈತ್ರಿಯ ಬಗ್ಗೆ ವ್ಯಾಪಕ ಅನುಮಾನಗಳು ಮತ್ತು ಅಮೆರಿಕ ಯುದ್ಧದ ಪರ ಪಾಕ್ ಹೋರಾಟಕ್ಕೆ ಆಕ್ಷೇಪಗಳು ಕೇಳಿಬಂದರೂ, ಕಾರ್ಯಾಚರಣೆಗೆ ಅನೇಕ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. |