ಶ್ರೀಲಂಕಾ ಸೇನೆಯ ಗುಂಡಿನ ದಾಳಿಗೆ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಹತನಾಗಿದ್ದಾನೆಂದು ಶ್ರೀಲಂಕಾ ಸೇನೆ ಹೇಳಿದ ಮಾರನೇ ದಿನವೇ ರಾಜಪಕ್ಷೆ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಆದರೆ ಪ್ರಭಾಕರನ್ ಸಾವನ್ನು ದೃಢಪಡಿಸುವ ಹೇಳಿಕೆಯನ್ನು ಅವರು ನೀಡಲಿಲ್ಲ. 'ಎಲ್‌ಟಿಟಿಇ ವಿರುದ್ಧ ವಿಜಯವನ್ನು ಸಾಧಿಸಲಾಗಿದೆ. ವಿಶ್ವದ ನಿರ್ದಯ ಸಂಘಟನೆ ಸಮಾಪ್ತಿಯಾಯಿತು' ಎಂದಷ್ಟೇ ರಾಜಪಕ್ಷೆ ಹೇಳಿದರು.
ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಗತಿ ಏನಾಯಿತೆಂಬ ಬಗ್ಗೆ ಮುಖ್ಯವಾಗಿ ಅವರು ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಮೃತ್ತಪಟ್ಟ ಎಲ್‌ಟಿಟಿಇ ಉಗ್ರರ ನಡುವೆ ಪ್ರಭಾಕರನ್ ದೇಹವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಸೇನೆ ನಿರತವಾಗಿದ್ದರಿಂದ ಪ್ರಭಾಕರನ್ ಸಾವನ್ನು ರಾಜಪಕ್ಷೆ ದೃಢಪಡಿಸದೇ ಸಂಯಮ ತೋರಿದರೆಂದು ವಿಶ್ಲೇಷಕರು ಭಾವಿಸಿದ್ದಾರೆ.
ಆದಾಗ್ಯೂ, ಎಲ್‌ಟಿಟಿಇ ಪರ ವೆಬ್‌ಸೈಟ್ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾನೆಂದು ತಿಳಿಸಿದೆ. ರಾಜಪಕ್ಷೆ ಅದೇ ಉಸಿರಿನಲ್ಲಿ , ತಮಿಳರು ಮತ್ತು ಸಿಂಹಳೀಯರ ಮಧ್ಯೆ ಸಾಮರಸ್ಯಕ್ಕೆ ಕರೆ ನೀಡಿ, ಎಲ್ಲರೂ ಸಮಾನ ಹಕ್ಕುಗಳೊಂದಿಗೆ ಯಾವುದೇ ಭಯವಿಲ್ಲದೇ ಜೀವಿಸಬೇಕೆನ್ನುವುದು ತಮ್ಮ ನಿರೀಕ್ಷೆಯಾಗಿದ್ದು, ಸ್ವತಂತ್ರ ರಾಷ್ಟ್ರದ ನಿರ್ಮಾಣಕ್ಕೆ ನಾವು ಏಕತೆಯಿಂದಿರಬೇಕೆಂದು ಹೇಳಿದರು.'ಅಲ್ಪಸಂಖ್ಯಾತರಿಗೆ ಯಾವ ರೀತಿಯ ನೆರವು ನೀಡಬೇಕೆಂದು ಲಂಕಾಗೆ ಸಲಹೆ ನೀಡುವ ಅಗತ್ಯವಿಲ್ಲ. ಎಲ್‌ಟಿಟಿಇ ಜತೆ ಕದನವು ತಮಿಳರ ಜತೆಯಲ್ಲ' ಎಂದು ರಾಜಪಕ್ಷೆ ಹೇಳಿದರು.
ಅದನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಅವರು ತಮಿಳಿನಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ್ದರು. ನಾವಿಂದು ರಾಷ್ಟ್ರದಿಂದ ಭಯೋತ್ಪಾದನೆಯನ್ನು ಅಳಿಸಿಹಾಕಿದ್ದೇವೆ. ಸುಮಾರು 3 ದಶಕಗಳ ಕಾಲ ನಮ್ಮ ಪ್ರದೇಶದ ಮೂರನೇ ಒಂದು ಭಾಗ ಆಡಳಿತದ ಅಡಿಯಲ್ಲಿರಲಿಲ್ಲ. ಇಂದು ಅಸೆಂಬ್ಲಿ ಅನುಮೋದಿಸುವ ಕಾನೂನುಗಳು ರಾಷ್ಟ್ರದ ಎಲ್ಲ ಪ್ರದೇಶಗಳಿಗೆ ಅನ್ವಯವಾಗುತ್ತದೆಂದು ಅಧ್ಯಕ್ಷರು ಹೆಮ್ಮೆಯಿಂದ ಹೇಳಿದರು. |