ಎಲ್ಟಿಟಿಇ ನಾಯಕ ಪ್ರಭಾಕರನ್ ಮೃತದೇಹವನ್ನು ಶ್ರೀಲಂಕಾದ ಪಡೆಗಳು ಮಂಗಳವಾರ ಪತ್ತೆಹಚ್ಚಿರುವುದಾಗಿ ಮಿಲಿಟರಿ ತಿಳಿಸಿದ್ದು, ಪ್ರಭಾಕರನ್ ಇನ್ನೂ ಜೀವಂತವಿದ್ದಾನೆಂಬ ಊಹಾಪೋಹಗಳಿಗೆ ತೆರೆಎಳೆದಿದೆ.ಖಾಸಗಿ ಸ್ವರ್ಣವಾಹಿನಿ ಟೆಲಿವಿಷನ್ ಕೇಂದ್ರದಲ್ಲಿ ತೋರಿಸಲಾದ ವಿಡಿಯೊ ಚಿತ್ರದಲ್ಲಿ ಪ್ರಭಾಕರನ್‌ನನ್ನು ಹೋಲುವ,ಗಾಢ ಹಸಿರು ಸಮವಸ್ತ್ರದಲ್ಲಿರುವ ಮೃತದೇಹವನ್ನು ಹುಲ್ಲಿನ ಮೇಲೆ ಮಲಗಿಸಲಾಗಿದ್ದು, ಪಕ್ಕದಲ್ಲಿ ಸೈನಿಕರು ನಿಂತಿದ್ದಾರೆ. ಪ್ರಭಾಕರನ್ ತಲೆಯ ಮೇಲ್ಭಾಗದಲ್ಲಿ ಗುಂಡಿನ ಗಾಯದ ಗುರುತನ್ನು ಮರೆಮಾಡುವ ಸಲುವಾಗಿ ನೀಲಿ ವಸ್ತ್ರದಲ್ಲಿ ಮುಚ್ಚಲಾಗಿದೆ.ಅವನ ತೆರೆದ ಕಣ್ಣುಗಳು ನೇರವಾಗಿ ದಿಟ್ಟಿಸುತ್ತಿತ್ತು ಮತ್ತು ಮುಖ ಊದಿಕೊಂಡಿದ್ದಂತೆ ಕಂಡುಬಂದಿದೆ.ಸರ್ಕಾರ ಪ್ರಭಾಕರನ್ ಹತ್ಯೆಯನ್ನು ಸೋಮವಾರ ಪ್ರಕಟಿಸಿ, ಬಳಿಕ ಅವನ ದೇಹ ಪತ್ತೆಯಾಗಿಲ್ಲವೆಂದು ತಿಳಿಸಿತ್ತು. ಆದರೆ ತಮಿಳು ಪರ ವೆಬ್‌ಸೈಟ್‌ನಲ್ಲಿ ಪ್ರಭಾಕರನ್ ಸಾವನ್ನು ನಿರಾಕರಿಸಿ ಸುರಕ್ಷಿತ ಸ್ಥಳದಲ್ಲಿದ್ದಾನೆಂದು ಹೇಳಲಾಗಿತ್ತು.ಪ್ರಭಾಕರನ್ ಸತ್ತಿದ್ದಾನೋ, ಬದುಕಿದ್ದಾನೋ ಎನ್ನುವ ಗೊಂದಲ ಆವರಿಸಿದ ನಡುವೆ, ಸೇನಾ ಮುಖ್ಯಸ್ಥ ಜನರಲ್ ಸರತ್ ಫೋನ್‌ಸೆಕಾ ಪ್ರಭಾಕರನ್ ದೇಹ ಪತ್ತೆಯಾಗಿದ್ದಾಗಿ ಪ್ರಕಟಿಸುವ ಮೂಲಕ ಊಹಾಪೋಹಗಳಿಗೆ ತೆರೆಎಳೆದರು.ಅಧ್ಯಕ್ಷ ರಾಜಪಕ್ಷೆ ಸಂಸತ್ತನ್ನು ಉದ್ದೇಶಿಸಿ ವಿಜಯದ ಘೋಷಣೆ ಮಾಡಿ, ತಮ್ಮ ರಾಷ್ಟ್ರವು ಭಯೋತ್ಪಾದನೆಯಿಂದ ವಿಮೋಚನೆ ಪಡೆದಿದೆಯೆಂದು ಹೇಳಿದ ಕೆಲವೇ ಗಂಟೆಗಳಲ್ಲಿ ಫೋನ್‌ಸೆಕಾ ಪ್ರಕಟಣೆ ಹೊರಬಿದ್ದಿದೆ. |