ತಮಿಳು ವ್ಯಾಘ್ರ ಬಂಡುಕೋರರ ವಿರುದ್ಧ ಕೊಲಂಬೊ ಜಯ ಘೋಷಿಸಿದ ಬಳಿಕ, ತನ್ನ ಭೂತಕಾಲದ ಪುಟಗಳನ್ನು ತಿರುವಿಹಾಕಿ, ಎಲ್ಲ ಪೌರರ ಹಕ್ಕುಗಳ ರಕ್ಷಣೆ ಮಾಡುವ ರಾಜಕೀಯ ವ್ಯವಸ್ಥೆ ಸೃಷ್ಟಿಗೆ ತಮಿಳರನ್ನು ತೊಡಗಿಸಿಕೊಳ್ಳುವಂತೆ ಅಮೆರಿಕ ಶ್ರೀಲಂಕಾಗೆ ಕರೆನೀಡಿದೆ.
ಪ್ರಜಾಪ್ರಭುತ್ವ, ಸಹನೆ ಮತ್ತು ಮಾನವಹಕ್ಕುಗಳಿಗೆ ಗೌರವಿಸುವ ಆಶಯವುಳ್ಳ ಶ್ರೀಲಂಕಾವನ್ನು ನಿರ್ಮಿಸಲು ಇದೊಂದು ಸದವಕಾಶ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ವರದಿಗಾರರಿಗೆ ಸೋಮವಾರ ತಿಳಿಸಿದರು. ವಿಪುಲ ಮಾನವ ಜೀವನಷ್ಟ ಮತ್ತು ಅಮಾಯಕ ನಾಗರಿಕರ ಹತ್ಯೆ ಮುಕ್ತಾಯವಾಗಿದ್ದು ನಿಟ್ಟುಸಿರುಬಿಡುವಂತಾಗಿದೆ ಎಂದು ಹೋರಾಟದ ಅಂತ್ಯವನ್ನು ಸ್ವಾಗತಿಸಿದ ಕೆಲ್ಲಿ ಹೇಳಿದರು.
ಸುಮಾರು 280,000 ಜನರು ಉತ್ತರಭಾಗದಿಂದ ಸಂತ್ರಸ್ತರಾಗಿದ್ದು, ಅವರು ಮನೆಗಳಿಗೆ ಹಿಂತಿರುಗುವುದನ್ನು ತ್ವರೆಗೊಳಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ಎಲ್‌ಟಿಟಿಇ ವಿರುದ್ಧ ನಿರ್ಣಾಯಕ ಮಿಲಿಟರಿ ಜಯ ಸಾಧಿಸಿದ ಕೊಲಂಬೊಗೆ ಅಮೆರಿಕ ಅಭಿನಂದನೆ ಸಲ್ಲಿಸಿಲ್ಲವೇಕೆಂಬ ಪ್ರಶ್ನೆಗೆ, ಶ್ರೀಲಂಕಾದ ಸಂತ್ರಸ್ತ ಜನರ ತುರ್ತುಅಗತ್ಯಗಳನ್ನು ನಿಭಾಯಿಸಲು ಅಮೆರಿಕ ಗಮನವಹಿಸಿದೆ ಎಂದು ಕೆಲ್ಲಿ ಹೇಳಿದರು. |