ಶ್ರೀಲಂಕಾ ಸೇನೆಯ ವಿರುದ್ಧ ಬ್ರಿಟನ್ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ತಮಿಳರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿದ್ದರಿಂದ 16 ಮಂದಿ ಗಾಯಗೊಂಡಿದ್ದಾರೆ ಮತ್ತು 10 ಜನರನ್ನು ಬಂಧಿಸಲಾಗಿದೆ.
ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ವಿಜಯದ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಂಡನ್ ಹೌಸ್ ಆಫ್ ಕಾಮನ್ಸ್ ಹೊರಗೆ ಪ್ರತಿಭಟನೆಕಾರರು ಧರಣಿ ಕುಳಿತರು. ಆದರೆ ರಸ್ತೆ ಸಂಚಾರ ಪುನಾರಂಭಕ್ಕೆ ಪೊಲೀಸರು ಪ್ರತಿಭಟನೆಕಾರರನ್ನು ತೆರವು ಮಾಡಲು ಯತ್ನಿಸಿದಾಗ ಮುಂಜಾನೆ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ನಾಂದಿಯಾಯಿತು.
ಈ ಘಟನೆಗೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿದ್ದಾಗಿ ಸ್ಕಾಟ್‌ಲ್ಯಾಂಡ್ ಯಾರ್ಡ್ ದೃಢಪಡಿಸಿದ್ದು, 16 ಜನರು ಗಾಯಗೊಂಡಿದ್ದಾಗಿ ಲಂಡನ್ ಆಂಬುಲೆನ್ಸ್ ಸೇವೆಯ ವಕ್ತಾರ ತಿಳಿಸಿದ್ದಾರೆ. ಸುಮಾರು 21 ಜನರನ್ನು ಸಣ್ಣಪುಟ್ಟ ಗಾಯಗಳಿಗಾಗಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ಒರಟಾಗಿ ವರ್ತಿಸಿದರೆಂದು ಕೆಲವು ಪ್ರತಿಭಟನೆಕಾರರು ದೂರಿದ್ದಾರೆ.ಜನರನ್ನು ಥಳಿಸಿ, ಒದೆಯಲಾಯಿತು.
ರಸ್ತೆಯಿಂದ ನಮ್ಮನ್ನು ಸಂಸತ್ತಿನ ಚೌಕದವರೆಗೆ ಪೊಲೀಸರು ತಳ್ಳುವವರೆಗೆ ನಮಗೆ ಏನಾಗುತ್ತದೆಂದು ತಿಳಿಯಲಿಲ್ಲ. ನಾವು ಅವರ ನೆರವನ್ನು ಯಾಚಿಸಿದರೆ ಬ್ರಿಟನ್ ಸರ್ಕಾರ ಈ ರೀತಿ ನಡೆಸಿಕೊಳ್ಳುವುದೇ ಎಂದವರು ಪ್ರಶ್ನಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಅನೇಕ ಮಂದಿ ಇಲ್ಲಿದ್ದಾರೆ. ಅವರು ಇಲ್ಲಿ ಶೋಕಾಚರಣೆಗೆ ಬಂದಿರುವಾಗ ಪೊಲೀಸರು ಈ ರೀತಿ ವರ್ತಿಸಿದ್ದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ. |