ಪಾಕಿಸ್ತಾನದ ಭದ್ರತಾಪಡೆಗಳು ಸ್ವಾತ್‌ನ ಎರಡು ಆಯಕಟ್ಟಿನ ನಗರಗಳಿಗೆ ಉಭಯ ಪಾರ್ಶ್ವಗಳಿಂದ ಆಕ್ರಮಣ ಮಾಡಿದ್ದು, ತಾಲಿಬಾನ್ ಪೀಡಿತ ಮಿಂಗೋರಾಗೆ ಸಮೀಪಿಸಿದೆ. ವಾಯವ್ಯ ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗುವ ತನಕ ಕಾರ್ಯಾಚರಣೆ ಮುಂದುವರಿಸುವುದಾಗಿ ಸರ್ಕಾರ ತಿಳಿಸಿದೆ.
ಹೆಲಿಕಾಪ್ಟರ್ ಗನ್‌ಶಿಪ್ ಮತ್ತು ಸಮರಜೆಟ್ ಬೆಂಬಲದಿಂದ ಪಾಕಿಸ್ತಾನ ಸೇನೆಯು ಮೂವರು ತಾಲಿಬಾನ್ ಕಮಾಂಡರ್‌ಗಳು ಸೇರಿದಂತೆ 27 ಮಂದಿ ಉಗ್ರರನ್ನು ಬಲಿತೆಗೆದುಕೊಂಡಿದ್ದು, ಭಾರೀ ಹೋರಾಟದ ನಿರೀಕ್ಷೆಯಲ್ಲಿ ಮಿಂಗೋರಾ ನಿವಾಸಿಗಳಿಗೆ ನಗರವನ್ನು ತೆರವು ಮಾಡುವಂತೆ ಸೇನೆ ಆದೇಶಿಸಿದೆ.
ಮಿಂಗೋರಾ ಹಾದಿಯಲ್ಲಿ ತಾಲಿಬಾನ್ ಭದ್ರಕೋಟೆಯೆಂದು ಹೇಳಲಾದ ಮಾಟ್ಟಾ ಮತ್ತು ಕಾಂಜುಗೆ ಪಡೆಗಳು ಪ್ರವೇಶಿಸಿವೆ. ಮಿಂಗೋರಾದಲ್ಲಿ ನೂರಾರು ತಾಲಿಬಾನ್ ಉಗ್ರರು ಅಡಗಿದ್ದು, ಪ್ರಮುಖ ಕಟ್ಟಡಗಳನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ರಸ್ತೆಗಳಲ್ಲಿ ನೆಲಬಾಂಬ್‌ಗಳನ್ನು ಇರಿಸಿ ಪಡೆಗಳ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ.
ಮಿಂಗೋರಾ ಕದನ ಸುದೀರ್ಘ ಮತ್ತು ರಕ್ತಸಿಕ್ತವಾಗಬಹುದೆಂದು ತಜ್ಞರು ಹೇಳಿದ್ದು, ಸೇನೆ ಪ್ರವೇಶಕ್ಕೆ ಮುಂಚಿತವಾಗಿ ನಾಗರಿಕರು ನಗರವನ್ನು ತ್ಯಜಿಸುವುದನ್ನು ಖಾತ್ರಿ ಮಾಡಲಾಗುತ್ತಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಮಿಂಗೋರಾದ ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಸೇನೆ ಧಾವಿಸುತ್ತಿದೆ. |