ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಸಾವಿಗೀಡಾಗಿದ್ದಾನೆ ಎಂಬ ಶ್ರೀಲಂಕಾದ ಘೋಷಣೆಯನ್ನು ವಿಶ್ವದ ತಮಿಳು ಸಮುದಾಯ ನಂಬುವ ಸ್ಥಿತಿಯಲ್ಲಿಲ್ಲ. ಪ್ರಭಾಕರನ್ ಖಂಡಿತಾ ಸತ್ತಿಲ್ಲ, ಆತ ಮತ್ತಷ್ಟು ಬಲದೊಂದಿಗೆ ಮರಳುತ್ತಾನೆ, ಅವನ ನೆರಳು ಮುಟ್ಟುವುದೂ ಯಾರಿಗೂ ಸಾಧ್ಯವಿಲ್ಲ ಎಂಬುದು ತಮಿಳು ಸಮುದಾಯದ ಬಲವಾದ ನಂಬಿಕೆ. ಪ್ರಭಾಕರನ್‌ನನ್ನು ನಿರ್ನಾಮ ಮಾಡಲಾಗಿದೆ ಎಂದು ಲಂಕಾ ಸರಕಾರ ಆತನ ಹೆಣದ ಚಿತ್ರವನ್ನೂ, ವೀಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೂ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ ತಮಿಳರು.
ಶ್ರೀಲಂಕಾದಲ್ಲಿ ಸರಕಾರದಿಂದ ದೌರ್ಜನ್ಯಕ್ಕೀಡಾಗುತ್ತಿರುವ ತಮಿಳರ ರಕ್ಷಣೆಗೆ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿರುವ ಪ್ರಭಾಕರನ್ ಇಷ್ಟು ಸುಲಭವಾಗಿ ಹತನಾದಾನೇ ಎಂಬುದು ಅವರನ್ನು ಕಾಡುವ ಶಂಕೆ. ಅವರ ಶಂಕೆಗೆ ಪುಷ್ಟಿ ನೀಡುವ ಕಾರಣಗಳ ಬಗ್ಗೆ ಒಂದಷ್ಟು ಮೆಲುಕು.
ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆತನ ದೇಹ ಮತ್ತು ಮುಖದ ಚರ್ಮದ ಕಾಂತಿಯಲ್ಲಿ ಅದೇನೋ ಭಿನ್ನತೆ ಕಾಣಿಸುತ್ತದೆ. ಮುಖವು ದೇಹದ ಬಣ್ಣಕ್ಕಿಂತ ಒಂದಿಷ್ಟು ಬಿಳುಪಾಗಿದೆ. ದಶಾವತಾರಂ ಚಿತ್ರ ನೋಡಿದವರಿಗೆ ಈ ರೀತಿಯ ಮುಖವಾಡ ಮಾಡುವುದು ಅಸಾಧ್ಯವೇನಲ್ಲ ಎಂಬುದರಲ್ಲಿ ನಂಬಿಕೆ ಇದೆ. ಮತ್ತೆ ಕೆಲವರು ಶಂಕಿಸುವ ಪ್ರಕಾರ, ಸತ್ತ ಹೆಣದ ಕುತ್ತಿಗೆ (ಸೈನಿಕರು ಪ್ರಭಾಕರನ್ ಮುಖವನ್ನು ಎತ್ತಿ ತೋರಿಸುತ್ತಿದ್ದಂತೆ) ಅಷ್ಟು ಸುಲಭವಾಗಿ ಅಲುಗಾಡಿಸುವುದು ಸಾಧ್ಯವೇ?
ಪ್ರಭಾಕರನ್‌ಗೆ 54 ವರ್ಷ ವಯಸ್ಸಾಗಿದೆ. ಆದರೆ ಟಿವಿಯಲ್ಲಿ ತೋರಿಸಲಾದ ಚಿತ್ರಗಳು ಅತನ ವಯಸ್ಸು ಕಡಿಮೆ ಇರುವಂತೆ ಕಾಣಿಸುತ್ತದೆ. ಪ್ರಭಾಕರನ್‌ಗಿಂತಲೂ ಅವನ ಪುತ್ರ ಚಾರ್ಲ್ಸ್ ಆಂತೋನಿಯೇ ವಯಸ್ಸಾದವನಂತೆ ಕಂಡುಬರುತ್ತಾನೆ. ತಲೆ ಬುರುಡೆ ಪುಡಿಯಾಗಿದೆ ಎಂದು ಲಂಕಾ ಸೇನೆ ಹೇಳಿದೆ. ಹಾಗಿದ್ದರೆ ಆ ಮುಖವು ಅಷ್ಟೊಂದು ಸ್ವಚ್ಛವಾಗಿ, ಏನೂ ಆಗದಂತೆ ಕಾಣಿಸುವುದು ಹೇಗೆ ಸಾಧ್ಯ? ಹಾಗಿದ್ದರೆ ಯಾವುದೋ ಒಂದು ದೇಹಕ್ಕೆ ಪ್ರಭಾಕರನ್‌ನ ಮುಖವಾಡವನ್ನು ಅಂಟಿಸಿ ತೋರಿಸಿದ್ದಾರೆಯೇ ಎಂಬುದು ಶಂಕೆಗೆ ಕಾರಣವಾದ ಸಂಗತಿ.
ಡಿಎನ್ಎ ಪರೀಕ್ಷೆ, ಅದನ್ನು ಆತನ ತಂದೆ-ತಾಯಿಯ ಡಿಎನ್ಎ ಜೊತೆ ಹೋಲಿಕೆ... ಇತ್ಯಾದಿ ಪ್ರಕ್ರಿಯೆಗಳಿಗೆಲ್ಲ ಕನಿಷ್ಠ ನಾಲ್ಕು ದಿನಗಳಾದರೂ ಬೇಕು ಎಂಬುದು ತಜ್ಞರ ಅಭಿಪ್ರಾಯ. ಹಾಗಿದ್ದರೆ, ಪ್ರಭಾಕರನ್ ಶವ ಸಿಕ್ಕಿದ ಕೆಲವೇ ಗಂಟೆಗಳಲ್ಲಿ ಡಿಎನ್ಎ ಪರೀಕ್ಷೆ ಮಾಡಿದ್ದೇವೆ, ಅದು ಪ್ರಭಾಕರನ್ ಶವ ಎಂಬುದು ದೃಢಪಟ್ಟಿದೆ ಎಂಬ ಶ್ರೀಲಂಕಾ ಸೇನೆಯ ಹೇಳಿಕೆ ಶಂಕೆಗೆ ಕಾರಣವಾಗಿದೆ. ಮೊದಲು, ಆತ ಪರಾರಿಯಾಗುತ್ತಿದ್ದಾಗ ಗುಂಡಿಕ್ಕಿ ಕೊಂದೆವು ಎಂದು ಹೇಳಿದ್ದ ಲಂಕಾ ಸೇನೆ, ಆ ಬಳಿಕ, ಆತ ಓಡಿ ಹೋಗುತ್ತಿರಲಿಲ್ಲ, ಎಲ್ಲೋ ದೂರದ ಅರಣ್ಯದಲ್ಲಿ ಆತನ ಶವ ಸಿಕ್ಕಿದೆ ಎಂದು ಹೇಳಿಕೆ ನೀಡಿದೆ. ಅಷ್ಟು ದೂರದ ಅರಣ್ಯದಿಂದ ಆತನ ರಕ್ತ ಮತ್ತು ಅಸ್ಥಿಮಜ್ಜೆ ತೆಗೆದು ಅದನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಿ ಡಿಎನ್ಎ ಪರೀಕ್ಷೆ ಮಾಡುವುದು ಅಷ್ಟು ಸರಳವೇ ಎಂಬ ಶಂಕೆ ಕಾಡುತ್ತದೆ. ಮತ್ತು ಅಷ್ಟು ಶೀಘ್ರವಾಗಿ ತುಲನೆ ಮಾಡಿ ನೋಡಲು ಸೇನೆಯ ಬಳಿ ಆತನ ಡಿಎನ್ಎ ಸ್ಯಾಂಪಲ್ ಇತ್ತೇ ಎಂಬ ಪ್ರಶ್ನೆಯೂ ಕಾಡುತ್ತದೆ.
ಇನ್ನೂ ವಿಶೇಷವೆಂದರೆ, ತಮಿಳು ರಾಜಕಾರಣಿಗಳ ಎಲ್ಟಿಟಿಇ-ಪ್ರಿಯತೆಯು ಎಲ್ಲರಿಗೂ ತಿಳಿದಿರುವ ವಿಚಾರ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಕೂಡ ಪ್ರಭಾಕರನ್ ಸಾವಿನ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಪಕ್ಕಾ ಎಲ್ಟಿಟಿಇ ಪರವಾಗಿರುವ ಎಂಡಿಎಂಕೆ ಮುಖಂಡ ವೈಕೋ ಕೂಡ ಸೊಲ್ಲೆತ್ತಿಲ್ಲ. ಹಾಗಿದ್ದರೆ, ಜನರಿಗೆ ಗೊತ್ತಿಲ್ಲದಿರುವಂಥದ್ದೇನಾದರೂ ಈ ತಮಿಳು ರಾಜಕಾರಣಿಗಳಿಗೆ ಗೊತ್ತಿದೆಯೇ ಎಂಬುದು ಮಗದೊಂದು ಪ್ರಶ್ನೆ.
ಸಿಕ್ಕಿಬಿದ್ದರೆ ನುಂಗಿಬಿಡಿ ಎಂದು ತನ್ನೆಲ್ಲಾ ಸೈನಿಕರಿಗೆ ಪ್ರಭಾಕರನ್ ಸಯನೈಡ್ ಗುಳಿಗೆಯನ್ನು ಕತ್ತಿನ ಹಾರದಲ್ಲಿ ಹಾಕಿಕೊಳ್ಳಲು ಆದೇಶಿಸಿದ್ದ. ಹಾಗಿದ್ದರೆ, ಲಂಕಾ ಸೈನಿಕರ ಕೈಗೆ ಸಿಕ್ಕಿಬೀಳುವ ಹಂತದಲ್ಲಿದ್ದಾಗ ಪ್ರಭಾಕರನ್ ಯಾಕೆ ಸಯನೈಡ್ ಸೇವಿಸಲಿಲ್ಲ? ಇವೆಲ್ಲ ಪ್ರಶ್ನೆಗಳ ಮಧ್ಯೆ, ಸಿಂಹಳೀಯರ ದೌರ್ಜನ್ಯಕ್ಕೆ ಸಿಲುಕಿದ ತಮಿಳು ಸಮುದಾಯದವರು ಪ್ರಭಾಕರನ್ ಇನ್ನೂ ಬದುಕಿದ್ದಾನೆ, ಮೇಲೆದ್ದು ಬರುತ್ತಾನೆ ಎಂದೇ ನಂಬಿದ್ದಾರೆ. |