ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಾಮಾವಶೇಷಗೊಂಡು ಆಂತರಿಕ ಯುದ್ಧಕ್ಕೆ ತೆರೆಬಿದ್ದ ಬಳಿಕ ತಮಿಳರು ಮತ್ತು ಸಿಂಹಳೀಯರ ಜತೆ ಅಧಿಕಾರ ಹಂಚಿಕೆ ವ್ಯವಸ್ಥೆ ಆರಂಭಿಸಿ ನಿರಂತರ ಶಾಂತಿಯನ್ನು ಸ್ಥಾಪಿಸಬೇಕೆಂದು ಅಮೆರಿಕವು ಕೊಲಂಬೊಗೆ ತಿಳಿಸಿದೆ.
ಭಯೋತ್ಪಾದನೆಯನ್ನು ನಿಜವಾಗಲೂ ಸೋಲಿಸಲು, ಯುದ್ಧದಿಂದ ಸಾವಿರಾರು ಜನರ ಸಾವಿನಿಂದ ಉಂಟಾದ ಗಾಯವನ್ನು ಶಮನಮಾಡಬೇಕು ಮತ್ತು ಪ್ರಜಾಪ್ರಭುತ್ವ, ಸಮೃದ್ಧ ಮತ್ತು ಏಕತೆ ಶ್ರೀಲಂಕಾ ನಿರ್ಮಾಣದತ್ತ ಕಾರ್ಯೋನ್ಮುಖವಾಗಬೇಕು ಎಂದು ವಿದೇಶಾಂಗ ಇಲಾಖೆ ವಕ್ತಾರ ಐಯಾನ್ ಕೆಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀಲಂಕನ್ನರ ಹಕ್ಕುಬಾಧ್ಯತೆ ರಕ್ಷಿಸುವ ಹೊಸ ಅಧಿಕಾರ ಹಂಚಿಕೆ ಸೂತ್ರದ ಸಾಧನೆಗೆ ಸಿಂಹಳೀಯರು, ತಮಿಳರು ಮತ್ತಿತರ ಶ್ರೀಲಂಕನ್ನರು ಒಂದಾಗಿ ಶ್ರಮಿಸುವುದರ ಮೇಲೆ ಶ್ರೀಲಂಕಾದಲ್ಲಿ ನಿರಂತರ ಶಾಂತಿ ಅವಲಂಬಿತವಾಗಿದೆ ಎಂದು ಕೆಲ್ಲಿ ಹೇಳಿದರು.
ಹೋರಾಟ ಸ್ಥಗಿತಗೊಂಡಿದ್ದನ್ನು ಸ್ವಾಗತಿಸಿದ ಅವರು, ಯುದ್ಧದಿಂದ ನಿರಾಶ್ರಿತರಾದ ಸಾವಿರಾರು ಜನರ ಹಿತರಕ್ಷಣೆ ಬಗ್ಗೆ ತಾವು ತೀವ್ರ ಕಾಳಜಿ ಹೊಂದಿರುವುದಾಗಿ ತಿಳಿಸಿದ್ದಾರೆ. |