ಸುಮಾರು 100ಕ್ಕಿಂತ ಹೆಚ್ಚು ಜನರನ್ನು ಒಯ್ಯುತ್ತಿದ್ದ ಇಂಡೋನೇಶಿಯ ಮಿಲಿಟರಿ ವಿಮಾನವು ಸ್ಫೋಟಿಸಿ ಬೆಂಕಿಯ ಉಂಡೆಯಾಗಿದ್ದರಿಂದ ಕನಿಷ್ಠ 68 ಜನರು ಸತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಹತ್ತಾರು ಜನರು ಗಾಯಗೊಂಡಿದ್ದು ಇನ್ನಷ್ಟು ಮಂದಿ ಸತ್ತಿರಬಹುದೆಂದು ಶಂಕಿಸಲಾಗಿದೆ. ಸ್ಥಳೀಯ ಟೆಲಿವಿಷನ್ ಚಿತ್ರಗಳಲ್ಲಿ ಬೆಂಕಿಯ ಕೆನ್ನಾಲಿಗೆ ವಿಮಾನದ ಪಳೆಯುಳಿಕೆಯನ್ನು ಆವರಿಸಿದ್ದನ್ನು ತೋರಿಸಿದ್ದು, ಸೈನಿಕರ ದೇಹಗಳನ್ನು ಸ್ಟ್ರೆಚರ್‌ಗಳಲ್ಲಿ ಒಯ್ಯಲಾಯಿತು. ಕೆಲವರು ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ.
112 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಒಯ್ಯುತ್ತಿದ್ದ ಸಿ-130 ಹರ್ಕ್ಯೂಲಸ್ ಮಾಮೂಲಿ ತರಬೇತಿ ನಡೆಸುವಾಗ ಪೂರ್ವ ಜಾವಾ ಪ್ರಾಂತ್ಯದಲ್ಲಿ ವಾಯುನೆಲೆಯಲ್ಲಿ ಅಪಘಾತಕ್ಕೀಡಾಯಿತು. ಗೆಪ್ಲಾಕ್ ಗ್ರಾಮದ ನಾಲ್ಕು ಮನೆಗಳಿಗೆ ಅಪ್ಪಳಿಸಿ ಬಳಿಕ ಬತ್ತದ ಗದ್ದೆಗೆ ಜಾರಿತೆಂದು ವಾಯುಪಡೆ ವಕ್ತಾರ ತಿಳಿಸಿದ್ದಾರೆ. ನಮಗೆ ಭಾರೀ ಆಸ್ಫೋಟ ಕೇಳಿಸಿತೆಂದು ಗ್ರಾಮಸ್ಥನೊಬ್ಬ ತಿಳಿಸಿದ್ದು, ವಿಮಾನವು ಅಲುಗಾಟ ಆರಂಭಿಸಿ ಬಳಿಕ ನೆಲಕ್ಕೆ ಅಪ್ಪಿಳಿಸಿತೆಂದು ಹೇಳಿದ್ದಾನೆ. |