ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನವು ಕೊನೆಗೂ ಮುಕ್ತಾಯ ಕಂಡಿತು. ಪ್ರಭಾಕರನ್ ಸಾವಿನೊಂದಿಗೆ ಎಲ್‌ಟಿಟಿಇ ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿತ್ತು. ಆದರೆ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನದಿಂದ ನಿರಾಶ್ರಿತರಾದ ಸಾವಿರಾರು ಮಂದಿ ತಮಿಳರಿಗೆ ತುರ್ತು ಮಾನವೀಯ ನೆರವು ನೀಡಲು ಪರಿಹಾರ ಏಜನ್ಸಿಗಳು ಮತ್ತು ಸರ್ಕಾರಗಳು ಕರೆ ನೀಡಿವೆ.
ಈ ಕುರಿತು ಶ್ರೀಲಂಕಾಗೆ ಭೇಟಿ ಕೊಡುವುದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಪ್ರಕಟಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆ ಮುಗಿದಿದ್ದರಿಂದ ತಮಗೆ ಸಮಾಧಾನವಾಗಿದೆ ಎಂದು ಬಾನ್ ಹೇಳಿದ್ದಾರೆ. ಆದರೆ ಅಪಾರ ಸಂಖ್ಯೆಯಲ್ಲಿ ನಾಗರಿಕರ ಸಾವುನೋವಿನಿಂದ ತಾವು ಕಳವಳಪಟ್ಟಿದ್ದಾಗಿ ಬಾನ್ ಹೇಳಿದ್ದು, ಮಾನವೀಯ ಪರಿಹಾರದಲ್ಲಿ ತುರ್ತು ಪ್ರಗತಿ, ಪುನರ್ನಿರ್ಮಾಣ ಮತ್ತು ಸುಸ್ಥಿರ ರಾಜಕೀಯ ಮಾತುಕತೆಯನ್ನು ಕಾಣಲು ತಾವು ಬಯಸುವುದಾಗಿ ಅವರು ಹೇಳಿದ್ದಾರೆ.
ಎಲ್ಲ ರಂಗಗಳಲ್ಲಿ ಪ್ರಗತಿ ಸಮಾನಾಂತರವಾಗಿರಬೇಕು ಮತ್ತು ಅದು ಈಗಲೇ ಆರಂಭವಾಗಬೇಕು ಎಂದು ಅವರು ಹೇಳಿದ್ದು, ಯಾವುದೇ ಯುದ್ಧಾಪರಾಧದ ಗಂಭೀರ ಆರೋಪಗಳನ್ನು ಸೂಕ್ತ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. |