ಶ್ರೀಲಂಕಾ ತಮಿಳರ ಹಿತರಕ್ಷಣೆಗಾಗಿ ಹೋರಾಡಿದ ಎಲ್‌ಟಿಟಿಇ ಸಂಘಟನೆ ನಿರ್ಮೂಲನೆಯಾಗಿದ್ದು, ರಾಜಕೀಯ ಪರಿಹಾರದ ಮೂಲಕ ತಮಿಳರಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಸ್ತಾವನೆಯನ್ನು ಅಧ್ಯಕ್ಷ ರಾಜಪಕ್ಷೆ ಮಂಡಿಸಿದ್ದಾರೆ.ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ಮರುದಿನವೇ ರಾಜಪಕ್ಷೆ ಸಂಸತ್ ಅಧಿವೇಶನ ಕರೆದು ತಮಿಳಿನಲ್ಲಿ ಸಂಕ್ಷಿಪ್ತ ಭಾಷಣ ಮಾಡುವ ಮೂಲಕ ಉತ್ತರದಲ್ಲಿರುವ ಅಲ್ಪಸಂಖ್ಯಾತ ತಮಿಳರನ್ನು ತಲುಪಲು ಅವರು ಯತ್ನಿಸಿದರು. ಮಿಲಿಟರಿ ಪರಿಹಾರವನ್ನು ಅಂತಿಮವೆಂದು ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಮತ್ತು ಎಲ್ಲ ಸಮುದಾಯದವರಿಗೆ ಸಮಾನ ಹಕ್ಕುಗಳನ್ನು ನೀಡುವುದು ತಮ್ಮ ಗುರಿಯೆಂದು ರಾಜಪಕ್ಷೆ ಹೇಳಿದರು.ರಾಷ್ಟ್ರದ ಎಲ್ಲ ಭಾಗಗಳ ಜನರ ಹಕ್ಕಾದ ಸ್ವಾತಂತ್ರ್ಯವನ್ನು ತಮಿಳುಜನರಿಗೆ ನೀಡುವ ಅಗತ್ಯವಿದೆ ಎಂದು ರಾಜಪಕ್ಷೆ ತಿಳಿಸಿದ್ದು, ಯಾವುದೇ ರಾಷ್ಟ್ರ ಅಥವಾ ಸರ್ಕಾರಕ್ಕಿಂತ ವೇಗವಾಗಿ ತಮಿಳರಿಗೆ ಅಗತ್ಯವಾದ ರಾಜಕೀಯ ಪರಿಹಾರಗಳನ್ನು ಅವರ ಸಮೀಪಕ್ಕೆ ತರುವುದಾಗಿ ರಾಜಪಕ್ಷೆ ಹೇಳಿದರು. ಆದರೆ ಅದು ಆಮದಾದ ಪರಿಹಾರವಲ್ಲ.ಇತರೆ ರಾಷ್ಟ್ರಗಳು ಸಲಹೆ ಮಾಡಿದ ಪರಿಹಾರಗಳನ್ನು ಕುರಿತು ಪ್ರಯೋಗ ಮಾಡಲು ನಮಗೆ ವೇಳೆಯಿಲ್ಲ ಎಂದು ಅವರು ಹೇಳಿ ರಾಷ್ಟ್ರದಲ್ಲೇ ಪರಿಹಾರ ಹುಡುಕುವುದಾಗಿ ತಿಳಿಸಿದರು. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ನೆರವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ನುಡಿದರು. |