ಕಳೆದ ಒಂದು ವಾರದಿಂದ ಬ್ರಿಟನ್ ಸಂಸತ್ತಿನ ಹೊರಗೆ ತಮಿಳರು ಕಲೆತು ತಾಯ್ನಾಡಿನಲ್ಲಿ ಆಂತರಿಕ ಕದನದಲ್ಲಿ ಸಿಕ್ಕಿಬಿದ್ದ ಸಾವಿರಾರು ತಮಿಳರ ಸಂಕಷ್ಟದ ಬಗ್ಗೆ ಜಗತ್ತಿನ ಗಮನ ಸೆಳೆಯಲು ಯತ್ನಿಸಿದರು. ಪ್ರಭಾಕರನ್ ಸೇನೆಯ ಗುಂಡಿಗೆ ಹತ್ಯೆಯಾದ ಸುದ್ದಿ ಕೇಳಿದ ಮೇಲೆ ಅವರಲ್ಲಿ ಶೋಕಪ್ರಜ್ಞೆ ಆವರಿಸಿದ್ದು, ಶ್ರೀಲಂಕಾದ ತಮಿಳು ಸಮುದಾಯದ ಜನರ ಭವಿಷ್ಯದ ಬಗ್ಗೆ ಅವರಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಪ್ರಭಾಕರನ್ ಸತ್ತಿಲ್ಲ. ಅವನನ್ನು ಎಲ್ಲಾ ತಮಿಳರು ಪ್ರೀತಿಸಿದ್ದು, ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾನೆಂದು ಪ್ರತಿಭಟನೆಕಾರ ಜೀವನ್ ಹೇಳಿದ್ದಾರೆ.
ಬ್ರಸೆಲ್ಸ್ ಯುರೋಪಿಯನ್ ಮಂಡಳಿಯ ಹೊರಗೆ ಪ್ರತಿಭಟನೆಗಳು ಜರುಗಿದವು. ಶ್ರೀಲಂಕಾದ ಮಾನವ ಹಕ್ಕು ದಮನದ ಪರಿಶೀಲನೆಗೆ ಸ್ವತಂತ್ರ ತನಿಖೆ ಸ್ಥಾಪಿಸುವ ಬಗ್ಗೆ ಚರ್ಚಿಸಲು ಅಲ್ಲಿ ವಿದೇಶಾಂಗ ಸಚಿವರು ಕಲೆತಿದ್ದರು. ಜಿನೀವಾದಲ್ಲಿ ನೂರಾರು ತಮಿಳರು ವಿಶ್ವಸಂಸ್ಥೆ ಮುಖ್ಯಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ತಮಿಳು ಪ್ರಾಬಲ್ಯದ ಪ್ರದೇಶವಾದ ಲಾ ಚಾಪಲ್ಲೆ ಜಿಲ್ಲೆಯಲ್ಲಿ ಮಂಕು ಕವಿದ ವಾತಾವರಣವಿತ್ತು. ಕಳೆದ ಒಂದು ತಿಂಗಳಿಂದ ತಮಿಳುಸಮುದಾಯ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮಿಳರಿಗೆ ರಾಜಕೀಯ ಪರಿಹಾರ ಸಿಗುವ ತನಕ ತಮ್ಮ ಪ್ರತಿಭಟನೆ ಮುಂದುವರಿಕೆಗೆ ಅವರು ಇಚ್ಛಿಸಿದ್ದಾರೆ.
ಫಿರಂಗಿ ಗುಂಡುಗಳಿಗೆ ಸಾವಿರಾರು ಜನರು ಸಾವು, ನೋವು ಅನುಭವಿಸಿದ್ದು, ಅವರ ದೇಹಗಳು ಎಲ್ಲಿವೆಯೆಂದು ತಮಿಳು ಸಮನ್ವಯ ಸಮಿತಿಯ ವಕ್ತಾರ ತಿರುಚೋಟಿ ತಿರು ಕೇಳಿದ್ದಾರೆ. ತೆರೆಮರೆಯಲ್ಲಿ ಏನಾಯಿತೆಂದು ಪ್ರತಿಯೊಬ್ಬರಿಗೂ ಬಹಿರಂಗ ಮಾಡಬೇಕು. ಈ ಪ್ರಶ್ನೆಗಳಿಗೆ ಶ್ರೀಲಂಕಾ ಉತ್ತರಿಸಬೇಕು. ಇದು ಸಮುದಾಯದ ಯುದ್ಧವಾಗಿದ್ದು, ರಾಜಕೀಯ ಪರಿಹಾರವಿಲ್ಲದೇ ಅಂತ್ಯ ಕಾಣುವುದಿಲ್ಲ. ನಾವು ಮುಕ್ತ ಜಗತ್ತಿನಲ್ಲಿ ವಾಸಿಸುತ್ತಿದ್ದು, ದಮನಕಾರಿ ನೀತಿ ವಿರುದ್ಧ ನಮಗೆ ಇಚ್ಛಿಸಿದ್ದನ್ನು ಮಾಡುತ್ತೇವೆ' ಎಂದು ಅವರು ಹೇಳಿದ್ದಾರೆ. |