ಶ್ರೀಲಂಕಾ ಸೇನೆ ಮತ್ತು ತಮಿಳು ವ್ಯಾಘ್ರಗಳ ನಡುವೆ ಕದನದಲ್ಲಿ ತಪ್ಪಿಸಿಕೊಂಡ ಸಾವಿರಾರು ನಾಗರಿಕರಿಗೆ ಆಶ್ರಯತಾಣವಾದ ಸರ್ಕಾರಿ ನಿಯಂತ್ರಿತ ಶಿಬಿರಗಳ ಪ್ರವೇಶಕ್ಕೆ ಮಾನವೀಯ ಸಂಘಟನೆಗಳಿಗೆ ನಿಷೇಧಿಸಲಾಗಿದೆಯೆಂದು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಸಂತ್ರಸ್ತರಾದ ಜನರು ತಂಗಿರುವ ಶಿಬಿರಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವೆನೆಮ್ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಶಿಬಿರಗಳಿಗೆ ಮಾನವೀಯ ನೆರವು ಕಾರ್ಯಕರ್ತರಿಗೆ ಪೂರ್ಣ ರೂಪದಲ್ಲಿ ಪ್ರವೇಶಕ್ಕೆ ಖಾತರಿಮಾಡಿ, ಹತಾಶೆಯಿಂದ ಕಾಯುತ್ತಿರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಬೇಕು ಎಂದು ಅವರು ಹೇಳಿದ್ದಾರೆ.
ಎಲ್‌ಟಿಟಿಇ ವಿರುದ್ಧ ಸರ್ಕಾರ ಜಯಘೋಷಣೆ ಮಾಡಿದ್ದರೂ ಶಿಬಿರಗಳಿಗೆ ರೋಗಗ್ರಸ್ತ, ಅಪೌಷ್ಠಿಕ ಮತ್ತು ಯುದ್ಧ ಗಾಯಗಳಿಂದ ಕೂಡಿದ ನಾಗರಿಕರು ಶಿಬಿರಗಳಿಗೆ ಬರುತ್ತಲೇ ಇದ್ದಾರೆ.ಈ ವಾರಾಂತ್ಯದಲ್ಲಿ ಸಂತ್ರಸ್ತರ ಸಂಖ್ಯೆ ಎರಡೂವರೆ ಲಕ್ಷ ಮೀರಬಹುದು ಎಂದು ಅವರು ಹೇಳಿದ್ದಾರೆ.
ಯುನಿಸೆಫ್ ಮಿಲಿಯಗಟ್ಟಲೆ ಲೀಟರ್ ನೀರನ್ನು ಪ್ರತಿನಿತ್ಯ ಒದಗಿಸುತ್ತಿದ್ದು, ಲೆಟ್ರಿನ್ ಮತ್ತು ಸ್ನಾನದ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಅದರ ಜತೆ ನೈರ್ಮಲ್ಯದ ಕಿಟ್‌ಗಳು, ತುರ್ತು ಆರೋಗ್ಯ ಕಿಟ್‌ಗಳು, ಅಡುಗೆ ಮಡಕೆಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ತಾತ್ಕಾಲಿಕ ಕಲಿಕಾ ತಾಣಗಳನ್ನು ನಿರ್ಮಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. |