ವಾಯವ್ಯ ಬಾಗ್ದಾದ್‌ನಲ್ಲಿ ಬುಧವಾರ ಶಕ್ತಿಶಾಲಿ ಕಾರ್‌ಬಾಂಬ್ ಸ್ಫೋಟಿಸಿ ಕನಿಷ್ಠ 34 ಜನರು ಅಸುನೀಗಿದ್ದಾರೆ ಮತ್ತು 72 ಮಂದಿ ಗಾಯಗೊಂಡಿದ್ದಾರೆ. ತಿನಿಸುಗಳು ಮತ್ತು ಮಾರುಕಟ್ಟೆಗಳಿಗೆ ಜನಪ್ರಿಯವಾದ ಅಲ್ ಸಡ್ರೈನ್ ಪಕ್ಕದಲ್ಲಿರುವ ಶುಲಾ ಕ್ವಾರ್ಟರ್‌ನಲ್ಲಿ ಈ ಸ್ಫೋಟ ಸಂಭವಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 29ರಂದ ಸರಣಿ ಬಾಂಬ್ ಸ್ಫೋಟದಲ್ಲಿ 50 ಮಂದಿ ಬಲಿಯಾದ ಬಳಿಕ ಬುಧವಾರ ಸಂಭವಿಸಿದ ಸ್ಫೋಟವು ಅತೀ ದೊಡ್ಡದಾಗಿದೆ. ಕಾರ್ ಬಾಂಬ್ ನಿಲ್ಲಿಸಿದ್ದ ಹೊಟೆಲುಗಳು ಮತ್ತು ಅಂಗಡಿಗಳ ಸುತ್ತಮುತ್ತ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯದ ಒಬ್ಬ ಅಧಿಕಾರಿ ಹೇಳಿದ್ದಾರೆ.
ಬೀದಿಗಳು ಜನರಿಂದ ಕಿಕ್ಕಿರಿದು ತುಂಬಿದ್ದಾಗ ಈ ಸ್ಫೋಟ ಸಂಭವಿಸಿದೆ. ಅನೇಕ ಮಂದಿ ಅಂಗಡಿಗಳಲ್ಲಿ ಖರೀದಿ ಮಾಡುವಾಗ ಮತ್ತು ಇನ್ನೂ ಕೆಲವರು ರೆಸ್ಟರೆಂಟ್‌ಗಳಲ್ಲಿ ಕುಳಿತಿದ್ದಾಗ ಸ್ಫೋಟ ಸಂಭವಿಸಿದ್ದರಿಂದ ಅನೇಕ ಜನರು ಬಲಿಯಾಗಿದ್ದಾರೆಂದು ರಕ್ಷಣಾ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. |