ತೈಲ ಸಮೃದ್ಧ ಸಂಯುಕ್ತ ಅರಬ್ ಎಮೈರೇಟ್ಸ್ ಜತೆ ಪರಮಾಣು ಇಂಧನ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಮ್ಮತಿಸಿದ್ದು, ಜಾರ್ಜ್ ಬುಷ್ ಆಡಳಿತದ ಕೊನೆಯ ದಿನಗಳಲ್ಲಿ ಸಹಿ ಹಾಕಿದ ಒಪ್ಪಂದಕ್ಕೆ ಒಬಾಮಾ ಸಮ್ಮತಿಯ ಮುದ್ರೆ ಒತ್ತಿದ್ದಾರೆ.
ಈ ಒಪ್ಪಂದವು ಈಗ ಸಂಸತ್ತಿನ ಮುಂದೆ ಬರಲಿದ್ದು, ಅದನ್ನು ತಿರಸ್ಕರಿಸಲು ಅಥವಾ ತಿದ್ದುಪಡಿ ಮಾಡಲು 90 ದಿನಗಳ ಕಾಲಾವಕಾಶವಿದೆ.ಸಂಯುಕ್ತ ಅರಬ್ ಒಕ್ಕೂಟಕ್ಕೆ ಸೂಕ್ಷ್ಮ ಪರಮಾಣು ಸಾಮಗ್ರಿಗಳನ್ನು ವರ್ಗಾವಣೆ ಮಾಡಲು ಅಮೆರಿಕಕ್ಕೆ ಕಾನೂನಿನ ಚೌಕಟ್ಟನ್ನು ಒಪ್ಪಂದವು ಸೃಷ್ಟಿಸುತ್ತದೆ. ಏಳು ಮಧ್ಯಪೂರ್ವ ರಾಷ್ಟ್ರಗಳ ಒಕ್ಕೂಟವಾದ ಎಮೈರೇಟ್ಸ್ ವಿದ್ಯುತ್‌ನ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಪರಮಾಣು ಶಕ್ತಿಯನ್ನು ಬಯಸಿದೆ.
ಅರಬ್ ರಾಷ್ಟ್ರಗಳಲ್ಲಿ ತೈಲಸಮೃದ್ಧಿಯಿಂದ ಕೂಡಿದ್ದರೂ, ವಿದ್ಯುತ್ ಉತ್ಪಾದನೆಗೆ ಶೇ.60 ನೈಸರ್ಗಿಕ ಅನಿಲವನ್ನು ಎಮೈರೇಟ್ಸ್ ಆಮದು ಮಾಡಿಕೊಳ್ಳುತ್ತಿದೆ. ಇಂಧನ ಅಗತ್ಯಗಳಿಗೆ ಹೊರಗಿನ ಮೂಲಗಳ ಮೇಲೆ ಅವಲಂಬನೆ ಮುರಿದು, ಪರಮಾಣು ಶಕ್ತಿಯನ್ನು ಉತ್ತಮ ಆಯ್ಕೆಯೆಂದು ಎಮೈರೇಟ್ಸ್ ಭಾವಿಸಿದೆ. |