ಪ್ರಧಾನಮಂತ್ರಿಯಾಗಿ ಎರಡನೇ ಅವಧಿಗೆ ಆಯ್ಕೆಯಾದ ಮನಮೋಹನ್ ಸಿಂಗ್ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಭಿನಂದಿಸಿದ್ದಾರೆ. ಸಿಂಗ್ ಅವರು ಮೇಧಾವಿ ನಾಯಕರಾಗಿದ್ದು, ಶೀಘ್ರದಲ್ಲೇ ತಾವು ಭಾರತಕ್ಕೆ ಭೇಟಿ ನೀಡಲು ಎದುರುನೋಡುತ್ತಿರುವುದಾಗಿ ತಿಳಿಸಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ಆಗಮಿಸಿದ ಮೀರಾ ಶಂಕರ್ ಅವರಿಗೆ ಒಬಾಮಾ ಮೇಲಿನ ವಿಷಯ ತಿಳಿಸಿದ್ದಾರೆ.
ಅಮೆರಿಕದ ರಾಯಭಾರಿಯಾಗಿ ಮೀರಾ ಶಂಕರ್ ತಮ್ಮ ಪರಿಚಯಪತ್ರವನ್ನು ಅಮೆರಿಕದ ಅಧ್ಯಕ್ಷರಿಗೆ ಸಲ್ಲಿಸಿದರು. ಸಂಕ್ಷಿಪ್ತ ಸಮಾರಂಭದಲ್ಲಿ ಒಬಾಮಾ ಇತ್ತೀಚಿಗೆ ನಡೆದ ಚುನಾವಣೆ ಬಗ್ಗೆ ಅಭಿನಂದನೆ ಸಲ್ಲಿಸಿದರು. ಸಿಂಗ್ ತಾವು ಗೌರವಿಸುವ ಮೇಧಾವಿ ಮುಖಂಡರೆಂದು ಒಬಾಮಾ ಹೇಳಿದರು.ಭಾರತ ಮತ್ತು ಅಮೆರಿಕ ನಡುವೆ ವ್ಯೂಹಾತ್ಮಕ ಸಹಭಾಗಿತ್ವ ಬಲಪಡಿಸಲು ತಾವು ಎದುರುನೋಡುತ್ತಿರುವುದಾಗಿ ರಾಯಭಾರಿ ಹೇಳಿದರು.
ರಾಯಭಾರಿಯಾಗಿದ್ದ ರೊನೇನ್ ಸೇನ್ ಅವಧಿ ಮಾ.31ಕ್ಕೆ ಮುಕ್ತಾಯವಾಗಿದ್ದು, ಶಂಕರ್ ಏಪ್ರಿಲ್ 26ರಂದು ಅಮೆರಿಕಕ್ಕೆ ಆಗಮಿಸಿದ್ದಾರೆ. ಇದಕ್ಕೆ ಮುಂಚೆ ಜರ್ಮನಿಗೆ ಭಾರತದ ರಾಯಭಾರಿಯಾಗಿ ಮೀರಾ ಶಂಕರ್ ಕಾರ್ಯನಿರ್ವಹಿಸಿದ್ದರು. |