ಶ್ರೀಲಂಕಾದ ರಾಜಕೀಯ ಪ್ರಕ್ರಿಯೆಯಲ್ಲಿ ತಮಿಳರಿಗೆ ಭವಿಷ್ಯ ಕಲ್ಪಿಸಲು ಇತ್ತೀಚೆಗೆ ಯುದ್ಧದಿಂದ ಜರ್ಜರಿತವಾದ ಪ್ರದೇಶದಲ್ಲಿ ಚುನಾವಣೆ ನಡೆಸಲಾಗುವುದೆಂದು ಶ್ರೀಲಂಕಾದ ರಾಷ್ಟ್ರೀಯ ಏಕತೆ ಮತ್ತು ಸಾಮರಸ್ಯ ಸಚಿವ ವಿನಾಯಕಮೂರ್ತಿ ಮುರಳಿಧರನ್ ತಿಳಿಸಿದ್ದಾರೆ.
ಯುದ್ಧದಿಂದ ಸಂತ್ರಸ್ತರಾದ ಜನರಿಗೆ ಪುನರ್ವಸತಿ ಕಲ್ಪಿಸಿದ ಬಳಿಕ ಈ ಚುನಾವಣೆ ನಡೆಸಲಾಗುವುದು ಎಂದು ಎಲ್‌ಟಿಟಿಇ ಮಾಜಿ ಕಮಾಂಡರ್ ಆಗಿದ್ದ, ಕರ್ನಲ್ ಕರುಣಾ ಎಂದೇ ಹೆಸರಾದ ಮುರಳೀಧರನ್ ತಿಳಿಸಿದ್ದು, ಚುನಾವಣೆಯು ತಮಿಳು ಅಲ್ಪಸಂಖ್ಯಾತರ ಕುಂದುಕೊರತೆಗಳಿಗೆ ಪರಿಹಾರ ಕಲ್ಪಿಸುತ್ತದೆಂದು ಹೇಳಿದ್ದಾರೆ.
ದ್ವೀಪದ ಉತ್ತರ ಮತ್ತು ಪೂರ್ವ ಭಾಗದಲ್ಲಿ ತಿಂಗಳುಗಟ್ಟಲೆ ಹೋರಾಟದ ಬಳಿಕ 250,000ಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.2004ರಲ್ಲಿ ಎಲ್‌ಟಿಟಿಇ ಸಂಘಟನೆಯಿಂದ ಬೇರ್ಪಟ್ಟು ಬೇರ್ಪಟ್ಟು ಶ್ರೀಲಂಕಾದ ರಾಜಕೀಯ ಮುಖ್ಯವಾಹಿನಿಗೆ ಸೇರಿದ್ದ ಮುರಳೀಧರನ್, ಭವಿಷ್ಯದ ರಾಜಕೀಯ ಪ್ರಕ್ರಿಯೆಯಲ್ಲಿ ತಮಿಳು ಜನರು ಭಾಗಿಯಾಗುತ್ತಾರೆಂದು ಆಶಿಸಿದರು. ರಾಜಕೀಯ ವ್ಯವಸ್ಥೆಯ ಮೂಲಕ ಸಮಸ್ಯೆಯ ಪರಿಹಾರಕ್ಕೆ ನಮ್ಮ ಸರ್ಕಾರ ಯತ್ನಿಸಿದೆ.
ಉತ್ತರದಲ್ಲಿ ನಿರ್ವಸಿತರ ಪುನರ್ವಸತಿ ಪೂರ್ಣಗೊಂಡ ಬಳಿಕ ನಾವು ಚುನಾವಣೆ ನಡೆಸುತ್ತೇವೆ ಎಂದು ಅವರು ಹೇಳಿದರು.ತಮಿಳರು ಸಂಸತ್ತಿನಲ್ಲಿ ಮಹತ್ತರ ಪಾತ್ರವಹಿಸಲು ತಾವು ಬಯಸುವುದಾಗಿ ಅವರು ಹೇಳಿದರು. ನಾವು ಪ್ರತಿಪಕ್ಷದಲ್ಲಿ ಕುಳಿತಿದ್ದರೆ ಅಲ್ಪಸಂಖ್ಯಾತರಿಗೆ ಯಾವುದೇ ಅನುಕೂಲ ಪಡೆಯುವುದು ಕಷ್ಟವಾಗುತ್ತದೆ ಎಂದು ಅವರು ನುಡಿದರು.
|