ನೇಪಾಳದ ಶೆರ್ಪಾವೊಬ್ಬರು ಮೌಂಟ್ ಎವರೆಸ್ಟ್ ಪರ್ವತವನ್ನು 19ನೇ ಬಾರಿಗೆ ಆರೋಹಣ ಮಾಡಿದ್ದು, ತಾವೇ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಹಿಮಾಲಯದಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗೃತಿ ಹೆಚ್ಚಿಸಲು ತಮ್ಮ ಎವರೆಸ್ಟ್ ಯಾತ್ರೆಯನ್ನು ಮುಡಿಪಾಗಿಡುವುದಾಗಿ ಅವರು ಹೇಳಿದ್ದಾರೆ.
41 ವರ್ಷ ವಯಸ್ಸಿನ ಅಪ್ಪಾ ಶೆರ್ಪಾ 8848 ಮೀಟರ್ ಎತ್ತರದ ಶಿಖರಶೃಂಗವನ್ನು ಗುರುವಾರ ಬೆಳಿಗ್ಗೆ ಮುಟ್ಟಿದ್ದು, 'ಹವಾಮಾನ ಬದಲಾವಣೆ ನಿಲ್ಲಿಸಿ, ಹಿಮಾಲಯ ಜೀವಿಸಲು ಬಿಡಿ' ಎಂಬ ಘೋಷಣೆಯ ವಿಶ್ವವನ್ಯಜೀವಿ ನಿಧಿ ಬ್ಯಾನರ್ ಹಾರಿಸಿದರು. ಗುರುವಾರ ಬೆಳಿಗ್ಗೆ 8 ಗಂಟೆಗೆ ಶಿಖರದ ಶೃಂಗವನ್ನು ಅಪ್ಪಾ ಮುಟ್ಟಿದ್ದಾರೆಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ಅಧಿಕಾರಿ ತಿಳಿಸಿದರು.
1990ರಲ್ಲಿ ಎವರೆಸ್ಟ್ ಪರ್ವತವನ್ನು ಮೊಟ್ಟಮೊದಲ ಬಾರಿಗೆ ಏರಿದ್ದ ಶೆರ್ಪಾ, ಎಕೊ ಎವರೆಸ್ಟ್ ಯಾತ್ರೆ 2009ರ ನೇತೃತ್ವ ವಹಿಸಿದ್ದು, ಜಾಗತಿಕ ತಾಪಮಾನ ಮತ್ತು ಹಿಮಾಲಯದ ಮೇಲೆ ಅದರ ಪರಿಣಾಮ ಕುರಿತು ವಿಶ್ವಜಾಗೃತಿ ಮೂಡಿಸಲು ತಮ್ಮ ಎವರೆಸ್ಟ್ ಆರೋಹಣವನ್ನು ಮುಡಿಪಾಗಿಟ್ಟಿದ್ದರು. |