'ಸ್ಪೈಡರ್‌ಮ್ಯಾನ್ 3' ಚಿತ್ರದಲ್ಲಿ ಬ್ರೇಕ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಸಿನೇಮಾದಲ್ಲಿ ಮುಂದಿನ ದೊಡ್ಡ ನಟಿಯಾಗುವ ಭರವಸೆ ಮೂಡಿಸಿದ್ದ ಬ್ರಿಟನ್ ನಟಿ ಲೂಸಿ ಗೋರ್ಡನ್ ಪ್ಯಾರಿಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸತ್ತುಬಿದ್ದಿರುವುದು ಪತ್ತೆಯಾಗಿದೆ. 28 ವರ್ಷ ವಯಸ್ಸಿನ ಗೋರ್ಡನ್ ತಮ್ಮ ಸೆಂಟ್ರಲ್ ಪ್ಯಾರಿಸ್ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕೆಯ ಮೃತದೇಹವನ್ನು ಆಕೆಯ ಗೆಳೆಯ ಪತ್ತೆಹಚ್ಚಿದ ಬಳಿಕ ಪೊಲೀಸರಿಗೆ ಸುದ್ದಿಮುಟ್ಟಿಸಿದನೆಂದು ಸನ್ ಆನ್‌ಲೈನ್ ವರದಿ ಮಾಡಿದೆ. ಪೊಲೀಸರ ವಕ್ತಾರರೊಬ್ಬರು ಆಕೆಯ ಸಾವನ್ನು ದೃಢಪಡಿಸಿದ್ದು, ಲೂಸಿ ಗೋರ್ಡನ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾಗಿ ಹೇಳಿದ್ದಾರೆ.ಗೋರ್ಡನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಏಜಂಟ್ ಜೀನ್ ಲೂವಿಸ್ ಡಯಾಮೊನಿಕಾ ದೃಢಪಡಿಸಿದ್ದಾರೆ.
ನಟಿಯ 29ನೇ ವರ್ಷದ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿವುಳಿದಿತ್ತು. ಫ್ರೆಂಚ್ ಸಾಂಸ್ಕೃತಿಕ ಕಣ್ಮಣಿ ಸರ್ಜ್ ಗೇನ್ಸ್‌ಬೋರ್ಗ್ ಅವರ ನಟಿ ಪತ್ನಿ ಜೇನ್ ಬಿರ್ಕಿನ್ ಪಾತ್ರದಲ್ಲಿ ಹೆಸರುನೀಡಿರದ ಚಿತ್ರದಲ್ಲಿ ಅವರು ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕೇನ್ಸ್ ಚಲನಚಿತ್ರೋತ್ಸವದ ವಕ್ತಾರರೊಬ್ಬರು ಗೋರ್ಡನ್ ಅವರನ್ನು ಅತ್ಯಂತ ಭರವಸೆಯ ನಟಿಯೆಂದು ತಿಳಿಸಿದ್ದು, ಈ ಸುದ್ದಿಯಿಂದ ತಮಗೆ ತೀವ್ರ ಆಘಾತವಾಗಿದ್ದಾಗಿ ಹೇಳಿದ್ದಾರೆ. |