ಇತ್ತೀಚೆಗೆ ಮುಕ್ತಾಯವಾದ ಯುದ್ಧದಿಂದ ಸಂತ್ರಸ್ತರಾದ 280,000 ತಮಿಳರ ಪುನರ್ವಸತಿ ಕೆಲಸವನ್ನು 6 ತಿಂಗಳಲ್ಲಿ ಮುಗಿಸುವುದಾಗಿ ಶ್ರೀಲಂಕಾ ಸರ್ಕಾರ ತಿಳಿಸಿದೆ.ಶ್ರೀಲಂಕಾ ತಮಿಳರ ಸಂಕಷ್ಟದ ಸ್ಥಿತಿ ಬಗ್ಗೆ ಗಮನಸೆಳೆಯಲು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ನಾರಾಯಣನ್ ಅವರು ಅಧ್ಯಕ್ಷ ರಾಜಪಕ್ಷೆ ಅವರನ್ನು ಭೇಟಿ ಮಾಡಿದ ಬಳಿಕ ಈ ಭರವಸೆ ನೀಡಲಾಯಿತು.
ಅವರ ಜಂಟಿ ಹೇಳಿಕೆಯು ತುರ್ತಾಗಿ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮತ್ತು ಕಾಯಂ ರಾಜಕೀಯ ಪರಿಹಾರ ಸಾಧಿಸುವ ಬಗ್ಗೆ ಒತ್ತಿಹೇಳಿದೆ. ಏತನ್ಮದ್ಯೆ,ಸಂತ್ರಸ್ತ ಶಿಬಿರಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆಯೆಂದು ನೆರವು ಸಂಸ್ಥೆಗಳು ದೂರಿವೆ. ತಮಿಳು ಬಂಡುಕೋರರ ಉಳಿದ ನೆಲೆಗಳನ್ನು ನಿರ್ಮೂಲನೆ ಮಾಡಿ ಅಲ್ಲಿ ಮೂಲಸೌಲಭ್ಯ ಮರುನಿರ್ಮಾಣ ಮಾಡುವ ಮೂಲಕ ಸಂತ್ರಸ್ತರು ಮನೆಗೆ ಹಿಂತಿರುಗಲು ಅವಕಾಶ ಕಲ್ಪಿಸುವುದಾಗಿ ಸರ್ಕಾರ ಹೇಳಿದೆ.
ಶ್ರೀಲಂಕಾ ತಮಿಳರು ತಮಿಳುನಾಡಿನ ಲಕ್ಷಾಂತರ ತಮಿಳರ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಈ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದೆ. ಪರಿಹಾರ, ಪುನರ್ವಸತಿ ಮತ್ತು ಮರುಸಂಧಾನಕ್ಕೆ ಗಮನ ಹರಿಸಲು ಈಗ ಸಕಾಲ ಎಂದು ಶ್ರೀಲಂಕಾ ಮತ್ತು ಭಾರತದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಕಾರ್ಯಾಚರಣೆಯಲ್ಲಿ ಸಂತ್ರಸ್ತರಾದ 2,80000 ಜನರಿಗೆ ಮಾನವೀಯ ನೆರವು ಕಲ್ಪಿಸುವ ಬಗ್ಗೆ ಉಭಯ ರಾಷ್ಟ್ರಗಳು ಸಹಕರಿಸುತ್ತಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. |